ತುಮಕೂರು: ಭಾರತವು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಬಂದೇ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘವು ನೂತನವಾಗಿ ನಿರ್ಮಿಸಿರುವ ಕಲ್ಪವೃಕ್ಷ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕತೆ ಬಹಳ ವೇಗವಾಗಿ ಬದಲಾಗುತ್ತಿದೆ. ಯಾವುದೇ ದೇಶಕ್ಕೆ ಹೋದರು ಭಾರತದ ತಾಂತ್ರಿಕ ಪದವೀಧರು ಸಿಗುತ್ತಾರೆ. ನಾಸಾದಲ್ಲಿ ಶೇ.20ರಷ್ಟು ವಿಜ್ಞಾನಿಗಳು ಭಾರತದವರಿದ್ದಾರೆ. ಹೀಗಾಗಿಯೇ ಪ್ರಪಂಚದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುತ್ತಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಪಾಲಿಟೆಕ್ನಿಕ್ ಬಹುಮುಖ್ಯವಾದ ಅಂಗ. ಕರ್ನಾಟಕವು ತಾಂತ್ರಿಕ ಶಿಕ್ಷಣ ನೀಡುವುದರಲ್ಲಿ ಮುಂದೆ ಇದೆ ಎಂದರು.
ದೇಶದಲ್ಲಿ ತಾಂತ್ರಿಕ ಪದವಿದರರನ್ನು ಉತ್ಪಾದಿಸುವುದರಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯ ನೀಡುತ್ತಿರುವ ಗುಣಮಟ್ಟದ ಶಿಕ್ಷಣದಿಂದ ಹೆಚ್ಚು ಪ್ರಾತಿನಿದ್ಯ ಸಿಕ್ಕಿದೆ. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಇಡೀ ವಿಶ್ವದಲ್ಲಿ ಮೊದಲ ಆದ್ಯತೆಯಲ್ಲಿ ಗುರುತಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಬಹುದು. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತ ಬಂದಿವೆ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ಪೂರ್ವಜರು ನಮ್ಮ ಹಿರಿಯರು ದೂರದೃಷ್ಟಿ ಇಟ್ಟುಕೊಂಡು, ಬಲಿಷ್ಟ ಭಾರತ ಕಟ್ಟಲು ಹಲವು ಯೋಜನೆಗಳನ್ನು ನೀಡಿದ್ದಾರೆ. ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ಶಿಕ್ಷಣ ಮತ್ತು ಕೈಗಾರಿಕೆಗೆ ಆದ್ಯತೆ ನೀಡಿದರು. ಯುವಕರನ್ನು ಕೈಗಾರಿಕೆಗೆ ಸೇರಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಿದರು. ದೇಶದಲ್ಲಿ ಇಂದಿಗೂ ಸಾವಿರಾರು ಪಾಲಿಟೆಕ್ನಿಕ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಜವಾಹರ್ ಲಾಲ್ ನೆಹರು ರವರು ಉದ್ಘಾಟಿಸಿರುವ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಾವಿರಾರು ಯುವಕರಿಗೆ ಭವಿಷ್ಯ ಕಲ್ಪಿಸಿದೆ ಎಂದರು.
ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಹೊಂದಲು ಅವಕಾಶವಿದೆ. ಆದರೆ, 60 ಸಾವಿರ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ತಕ್ಷಣ ಕೆಲಸ ಸಿಗುವ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಬೇಕು. ಸೈಬರ್ ಸೆಕ್ಯೂರಿಟಿ, ಡೇಟಾ ಮ್ಯಾನೆಜ್‌ಮೆಂಟ್, ಎಐ ತಂತ್ರಜ್ಞಾನಕ್ಕೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರು, ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ, ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಕುಮಾರ್, ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW