ತುಮಕೂರು: ಭಾರತ ರತ್ನ, ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಇಂದು ಚಾಲನೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ ಮತ್ತು ಅವರ 134ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ ರಾಂ ಅವರ 118ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿಂದು ಇಬ್ಬರು ಮಹನೀಯರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಛಾಯಾಚಿತ್ರ ಪ್ರದರ್ಶನದಲ್ಲಿ ಡಾಃ ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಸುಮಾರು 116 ಅಪರೂಪದ ಛಾಯಾಚಿತ್ರಗಳನ್ನು ಇರಿಸಲಾಗಿತ್ತು.
ಅಂಬೇಡ್ಕರ್ ಅವರ ಛಾಯಾಚಿತ್ರ ಪ್ರದರ್ಶನ:
ಅಂಬೇಡ್ಕರ್ ಅವರು 1942ರ ಜುಲೈ 20ರಂದು ಕಮ್ಯಾಂಡಿಂಗ್ ಆಫೀಸರ್ ಹುದ್ದೆಯಲ್ಲಿದ್ದಾಗ ಮಿಲಿಟರಿ ಅಧಿಕಾರಿ ಹಾಗೂ ಸೈನಿಕರೊಂದಿಗೆ, 1956ರ ಅಕ್ಟೋಬರ್ 14ರಂದು ಬೌದ್ಧಧರ್ಮಕ್ಕೆ ದೀಕ್ಷೆ ಪಡೆದ, 1950 ಮೇ 8ರಂದು ರಾಷ್ಟçಪತಿ ಭವನದಲ್ಲಿ ಮೊದಲ ಕಾನೂನು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ, 1956ರ ಅಕ್ಟೋಬರ್ 15ರಂದು ನಾಗಪುರದಲ್ಲಿ ಧಮ್ಮ ದೀಕ್ಷಾ ಸಮಾರಂಭ, 1954ರ ಅಕ್ಟೋಬರ್ 29ರಂದು ಮುಂಬಯಿಯಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡ, 1955ರ ನವೆಂಬರ್ 11ರ ಪತ್ನಿ ರಮಾಬಾಯಿ ಅವರೊಂದಿಗೆ ದೆಹಲಿಯ ಬಿರ್ಲಾ ಮಂದಿರದ ಬುದ್ಧವಿಹಾರಕ್ಕೆ ಭೇಟಿ ನೀಡಿದ ಸಂದರ್ಭ, 1952ರಲ್ಲಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಪ್ರತಿನಿಧಿಸಿದ, 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ದಿನದಂದು ಪ್ರಧಾನಿ ಜವಾಹರ ಲಾಲ್ ನೆಹರೂ ಅವರೊಂದಿಗೆ ಮಾತುಕತೆ, 1951ರ ಸೆಪ್ಟೆಂಬರ್ 27ರಂದು ಹಿಂದು ಕೋಡ್ ಬಿಲ್ ತಿರಸ್ಕೃತಗೊಂಡ ಸಂದರ್ಭದಲ್ಲಿ ಕಾನೂನು ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ, 1952ರ ಡಿಸೆಂಬರ್ 22ರಂದು ಪೂನಾದಲ್ಲಿ ಜಿಲ್ಲಾ ಕಾನೂನು ಗ್ರಂಥಾಲಯ ಉದ್ಘಾಟನೆ, 1946ರಲ್ಲಿ ಲಂಡನ್ ಭೇಟಿ, 1942ರ ಏಪ್ರಿಲ್ 14ರಂದು ದಾದರ್ ನ ಹಿಂದೂ ಕಾಲೋನಿಯಲ್ಲಿ ತಮ್ಮ ಜನ್ಮ ದಿನಾಚರಣೆ, 1950ರ ಜನವರಿ 26ರಂದು ಮೊದಲ ಸ್ವತಂತ್ರ ಕ್ಯಾಬಿನೆಟ್ ಸಚಿವರಾದ ನೆಹರು, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಚಕ್ರವರ್ತಿ ರಾಜಾಗೋಪಾಲಾಚಾರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜಗಜೀವನ ರಾಂ, ರಾಜಕುಮಾರಿ ಅಮ್ರಿತ್ ಕೌರ್ ಹಾಗೂ ಮತ್ತಿತರರೊಂದಿಗೆ ಅಂಬೇಡ್ಕರ್, 1949ರ ಮೇ 16ರಂದು ಸಂವಿಧಾನ ಕರಡು ಸಿದ್ಧತೆಯಲ್ಲಿ ತೊಡಗಿರುವ, ಕಾರ್ಮಿಕ ಮಂತ್ರಿಯಾಗಿದ್ದಾಗ 1943ರ ಡಿಸೆಂಬರ್ 9ರಂದು ಬಿಹಾರದ ಧನ್ಬಾದ್ನಲ್ಲಿ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ, 1956ರ ನವೆಂಬರ್ 20ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ ಕುರಿತ 4ನೇ ಸಮ್ಮೇಳನದಲ್ಲಿ ಪಾಲ್ಗೊಂಡ, ಸಂದರ್ಭ ಸೇರಿದಂತೆ ಮತ್ತಿತರ ಹಲವಾರು ವಿಶೇಷ ಸಂದರ್ಭಗಳಲ್ಲಿ ಸೆರೆ ಹಿಡಿಯಲಾದ ಅಪರೂಪದ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿತ್ತು.
ಬಾಬು ಜಗಜೀವನ ರಾಂ ಅವರ ಛಾಯಾಚಿತ್ರ ಪ್ರದರ್ಶನ:
ಮತ್ತೊಬ್ಬ ಮಹನೀಯ, ದೇಶ ಕಂಡ ಧೀಮಂತ ವ್ಯಕ್ತಿ, ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ: ಬಾಬು ಜಗಜೀವನರಾಂ ಅವರ ಆಯ್ದ ಛಾಯಾಚಿತ್ರಗಳನ್ನೂ ಸಹ ಪ್ರದರ್ಶಿಸಲಾಗಿತ್ತು.
ಬಾಬೂಜಿಯವರು 1967ರ ಫೆಬ್ರುವರಿ 4ರಂದು ವಿಕ್ರಮ್ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಪಡೆದ ಸಂದರ್ಭ, 1971ರಲ್ಲಿ ದೆಹಲಿಯಲ್ಲಿ ಪ್ರಧಾನಿ ಇಂದಿರಾಗಾAಧಿಯವರು ಬಾಬೂಜಿಯವರನ್ನು ಗೌರವಿಸಿದ ಸಂದರ್ಭ, 1966ರಲ್ಲಿ ಫಿಲಿಫೈನ್ಸ್ ಉಪಾಧ್ಯಕ್ಷರ ಮನೆಯಲ್ಲಿ ಔತಣಕೂಟ, 1986ರ ಏಪ್ರಿಲ್ 5ರಂದು ಪ್ರಧಾನಿ ರಾಜೀವಗಾಂಧಿ ಅವರು ಬಾಬೂಜಿ ಅವರಿಗೆ ಜನ್ಮ ದಿನಾಚರಣೆ ಶುಭ ಕೋರುತ್ತಿರುವ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರೊಂದಿಗೆ, ತಾಷ್ಕೆಂಟ್ ಅಧ್ಯಕ್ಷೆ ನಸಿರುದ್ದೀನೋವಾ ಅವರೊಂದಿಗೆ, 1974ರಲ್ಲಿ ಇಟಲಿಯಲ್ಲಿ ನಡೆದ ವಿಶ್ವ ಆಹಾರ ಸಮ್ಮೇಳನದಲ್ಲಿ ಪಾಲ್ಗೊಂಡ, ನವದೆಹಲಿಯಲ್ಲಿ ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್-6 ಅವರೊಂದಿಗೆ ಬಾಬು ಜಗಜೀವನ ರಾಂ ಅವರು ಕಳೆದ ಕ್ಷಣಗಳ ಬಗ್ಗೆ ಸೆರೆ ಹಿಡಿಯಲಾದ ಛಾಯಾಚಿತ್ರಗಳು ಬಾಬೂಜಿಯವರ ಜೀವನ ಚರಿತ್ರೆಯ ಹಲವು ಹಂತಗಳನ್ನು ನೋಡುಗರಿಗೆ ಪರಿಚಯಿಸಿದವು.
ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ:
ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನವು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜನರು ಸಾಲುಗಟ್ಟಿ ನಿಂತು ಧೀಮಂತ ನಾಯಕರ ಜೀವನದ ಹಲವು ಮಜಲುಗಳ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಕೇಂದ್ರ, ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ, ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಕುಣಿಗಲ್ ಶಾಸಕ ಡಾ.ಹೆಚ್.ಡಿ. ರಂಗನಾಥ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ, ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————