ತುಮಕೂರು: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪಿ.ವಿ.ನಾರಾಯಣ ಕೊರಟಗೆರೆ ತಾಲ್ಲೂಕಿನವರು. ಅವರು 80ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಆಸೆಪಡದ ಪಿ.ವಿ.ನಾರಾಯಣ ಅವರ ಮರಣ ಕನ್ನಡ ಸಾಹಿತ್ಯದ ಹಿರಿಯ ಕೊಂಡಿಯೊಂದು ಕಳಚಿದಂತೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಪಿ.ವಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರು ಸಂಪಾದಿಸಿದ ರಾಮಾಯಣ ಕೃತಿಯೊಂದನ್ನು ಬಿಡುಗಡೆ ಮಾಡಿದುದನ್ನು ಸ್ಮರಿಸಿದ ಅವರು ಪಿ.ವಿ.ನಾರಾಯಣ ಒಬ್ಬ ವಿದ್ವತ್ತಿನ ಗಣಿ ಆಗಿದ್ದರು ಎಂದರು.
ಸಂಶೋಧಕ ಡಾ. ಬಿ.ನಂಜುಂಡಸ್ವಾಮಿ ಮಾತನಾಡಿ, ಮೈಸೂರು ಅರಸರ ಕಾಲದಲ್ಲಿ ಪ್ರಧಾನಿ ಆಗಿದ್ದ ಪ್ರಧಾನ ವೆಂಕಪ್ಪಯ್ಯನವರ ವಂಶಸ್ಥರಾದ ಪಿ.ವಿ.ನಾರಾಯಣ ಹನ್ನೆರಡನೇ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ವಚನ ಸಾಹಿತ್ಯ-ಸಾಂಸ್ಕೃತಿಕ ಅಧ್ಯಯನ ಎಂಬ ಕೃತಿಯನ್ನು ರಚಿಸಿ ಪ್ರಸಿದ್ಧಿಯಾಗಿದ್ದರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಒಂದು ಸಾವಿರ ವಚನಗಳಿಗೆ ಇಂಗ್ಲೀಷ್ ನಲ್ಲಿ ವ್ಯಾಖ್ಯಾನವನ್ನು ಬರೆದಿದ್ದಾರೆ ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸಂಶೋಧನೆ, ವಿಮರ್ಶೆ, ಸಂಪಾದನೆ, ಕಾದಂಬರಿ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದು ಪಿ.ವಿ.ನಾರಾಯಣ ರಚಿಸಿದ ಧರ್ಮಕಾರಣ ಕಾದಂಬರಿ ವಿವಾದಕ್ಕೀಡಾಗಿತ್ತು. ಆದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳುವ ಅವರು ಮೇರುಮಟ್ಟದ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿ ಅವುಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಅವರನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡದಿದ್ದುದು ಅತ್ಯಂತ ವಿಶಾದದ ಸಂಗತಿಯಾಗಿದೆ. ಪಿ.ವಿ.ನಾರಾಯಣ ಅವರ ಕೃತಿಗಳನ್ನು ಕುರಿತಂತೆ ವಿಚಾರ ಸಂಕಿರಣವನ್ನು ಏರ್ಪಡಿಸಿದರೆ ಅವರ ಬರಹದ ಪೂರ್ಣ ಅರಿವು ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ, ಜಿ.ಹೆಚ್.ಮಹದೇವಪ್ಪ, ಕೆ.ಎಸ್.ತೇಜಸ್ವಿ, ಚಿಕ್ಕಬೆಳ್ಳಾವಿ ಶಿವಕುಮಾರ್, ಉಮೇಶ್, ಚಾಂದು ಇತರರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4