ತುಮಕೂರು: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರಿ ಕಚೇರಿ ಮತ್ತು ಅಧೀನ ಕಚೇರಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಗಳನ್ನು ರಚಿಸಬೇಕೆಂದು ಕಚೇರಿ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೂಚನೆ ನೀಡಿದ್ದಾರೆ.
ರಚಿಸಲಾದ ದೂರು ನಿವಾರಣಾ ಸಮಿತಿಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡುವುದು ಕಚೇರಿಯ ಮುಖ್ಯಸ್ಥರ ಕರ್ತವ್ಯವಾಗಿರುತ್ತದೆ. ಕಚೇರಿ ಮುಖ್ಯಸ್ಥರು, ಕಚೇರಿ ಮತ್ತು ಅಧೀನ ಕಚೇರಿ/ಖಾಸಗಿ ಸಂಸ್ಥೆ/ಕಾರ್ಖಾನೆ, ಶಾಲಾ–ಕಾಲೇಜುಗಳಲ್ಲಿ 10ಕ್ಕಿಂತ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚನೆ ಮಾಡಬೇಕು. ಸಮಿತಿ ರಚನೆ ಮಾಡಿದ ಮಾಹಿತಿಯನ್ನು SHE–Box ವೆಬ್ ಸೈಟ್ ವಿಳಾಸ: https://shebox.wcd.gov.in/signin ನಲ್ಲಿ ಆಪ್‌ಲೋಡ್ ಮಾಡಲು ಕ್ರಮವಹಿಸಬೇಕು.
ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಕಚೇರಿ, ನಿಗಮ-ಮಂಡಳಿ, ಸಾರ್ವಜನಿಕ ಉದ್ದಿಮೆ, ಕಾರ್ಖಾನೆ, ಗಾರ್ಮೆಂಟ್ಸ್, ವಿಶ್ವವಿದ್ಯಾಲಯ, ಶಾಲಾ–ಕಾಲೇಜು, ಸಂಘ–ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆ, ಅಂಚೆ ಕಚೇರಿ, ಬ್ಯಾಂಕ್ ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಹಾಗೂ ಸ್ವೀಕೃತವಾದ ದೂರುಗಳನ್ನು ಪರಿಹರಿಸಲು 2013ರ ಅಧಿನಿಯಮವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ.
ಆಂತರಿಕ ದೂರು ಸಮಿತಿ ರಚನೆಯಾಗದಿರುವ ಎಲ್ಲಾ ಸರ್ಕಾರಿ ಕಚೇರಿ, ನಿಗಮ, ಮಂಡಳಿಗಳಲ್ಲದೆ ಜಿಲ್ಲಾ ಮಟ್ಟದ ಅಧೀನ ಕಚೇರಿಗಳಲ್ಲಿಯೂ ಸಹ ಆಂತರಿಕ ದೂರು ನಿವಾರಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಈಗಾಗಲೇ ದೂರು ಸಮಿತಿ ರಚನೆಯಾಗಿದ್ದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಆಂತರಿಕ ದೂರು ಸಮಿತಿಯ ವಿವರಗಳನ್ನು ಪರಿಷ್ಕೃತ ವೆಬ್ ನಲ್ಲಿ (https://shebox.wcd.gov.in/signin) ಕಾಲೋಚಿತಗೊಳಿಸ(Upload)ಬೇಕು. ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯ್ದೆಯ ಪ್ರತಿಯೊಂದು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಖಚಿತಪಡಿಸಬೇಕು.
ಔಪಚಾರಿಕ ಮತ್ತು ಔಪಚಾರಿಕವಲ್ಲದ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ಮುಕ್ತವಾದ ಸುರಕ್ಷಿತ ಕೆಲಸದ ವಾತಾವರಣವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.
ಆಂತರಿಕ ದೂರು ನಿವಾರಣಾ ಸಮಿತಿ ರಚನೆ ಕುರಿತು ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಬೇಕಾಗಿದ್ದು, ಸಮಿತಿ ರಚಿಸಿರುವ ಕುರಿತ ಮಾಹಿತಿಯನ್ನು ಮಾರ್ಚ್ 26ರೊಳಗಾಗಿ ವೆಬ್ ಸೈಟ್ ನಲ್ಲಿ ಆಪ್ ಲೋಡ್ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ/ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7846941493, 7022895946 ಮತ್ತು 9743457210ಯನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4