ಬೆಳಗಾವಿ: ಮಕರ ಸಂಕ್ರಾಂತಿ ಹಬ್ಬಕ್ಕೆ ಮಗಳಿಗೆ ವಿವಿಧ ಅಡುಗೆ ಮಾಡಿ, ಬುತ್ತಿ ಹಿಡಿದುಕೊಂಡು ಅಳಿಯನ ಮನೆಗೆ ಬಂದ ಅತ್ತೆಯನ್ನು ಅಳಿಯನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪದಮುಕಿ(43) ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಇವರ ಅಳಿಯ ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಆರೋಪಿ ಶುಭಂ 7 ತಿಂಗಳ ಹಿಂದಷ್ಟೇ ರೇಣುಕಾ ಪುತ್ರಿ ಛಾಯಾಳನ್ನು ವಿವಾಹವಾಗಿದ್ದನು. ಹೀಗಾಗಿ ರೇಣುಕಾ ಮಗಳಿಗೆ ಎಳ್ಳು ಬೆಲ್ಲದ ಜೊತೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಮಗಳ ಮನೆಗೆ ಬಂದಿದ್ದರು. ಆದರೆ ಈ ವೇಳೆ ಹಣ ಕೊಡಲಿಲ್ಲವೆಂದು ಶುಭಂ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಛಾಯಾ ಚಿಕಿತ್ಸೆಗೆ ಖರ್ಚಾಗಿದ್ದ ಹಣ ನೀಡುವಂತೆ ಶುಭಂ ಖ್ಯಾತೆ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಏಕಾಏಕಿ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮವಾಗಿ ರೇಣುಕಾ ಅವರು ತೀವ್ರ ರಕ್ತಸ್ರಾವದಿಂದ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಆರೋಪಿ ಶುಭಂ ಬಿರ್ಜೆ ಹಾಗೂ ಆತನ ಪೋಷಕರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx