ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಾಗದಿರುವ ಕುರಿತು ಪ್ರಸ್ತಾಪಿಸಿದರು. ಈ ವೇಳೆ ವಿಕ್ಷಗಳು ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದು ಗದ್ದಲ ಉಂಟು ಮಾಡಿದರು.
ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಮಂಡಿಸಿದ ಬಜೆಟ್ ನಲ್ಲಿ 5300 ಕೋಟಿ ರೂಪಾಯಿ ಅಪ್ಪರ್ ಭದ್ರಾ ಯೋಜನೆ ಕೊಡುವುದಾಗಿ ಹೇಳಿದ್ದರು. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಆಗಿ ಘೋಷಿಸಲಾಗಿದೆ ಎಂದು ಸಾರಿದರೂ ಇದುವರೆಗೂ ಒಂದೂ ರೂಪಾಯಿಯೂ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಸದನ ಕದನ ಭೂಮಿಯಾಗಿ ಪರಿವರ್ತನೆಯಾಯಿತು.
ಈ ಯೋಜನೆ ನಿಲ್ಲಬಾರದು ಎಂಬ ಕಾರಣಕ್ಕೆ 1000 ಕೋಟಿ ರೂಪಾಯಿ ರಾಜ್ಯ ಸರ್ಕಾರದಿಂದ ನೀಡಲಾಗಿದೆ. ಕೇಂದ್ರ ಸರ್ಕಾರ ಏಳು ಕೋಟಿ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಸಿಎಂ ಜರಿದರು.
ಮುಖ್ಯಮಂತ್ರಿಯೇ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷಗಳು ಗದ್ದಲ ಎಬ್ಬಿಸಿದವು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.
ಸರ್ಕಾರ ವಿಪಕ್ಷಗಳ ಎಲ್ಲಾ ಪ್ರಶ್ನೆಗೆ ಉತ್ತರಿಸಲಿದೆ. ಆದರೆ ನಿಮ್ಮ ಗುಂಡಾಗಿರಿಗೆ ಸೊಪ್ಪು ಹಾಕಲ್ಲ. ಸತ್ಯವನ್ನು ಹೇಳಿಯೇ ಹೇಳುತ್ತೇನೆ. ರಾಜ್ಯದ ಜನ ಛೀ.. ತೂ.. ಎಂದು ಉಗಿಯಬೇಕು ಎಂದು ಜರಿದರು. ತದನಂತರ ಕಾಂಗ್ರೆಸ್ ಸದಸ್ಯರು ನಮ್ಮ ತೆರಿಗೆ ನಮ್ಮಹಕ್ಕು ಘೋಷಣೆ ಮೊಳಗಿಸಿದರು.


