ಪಾವಗಡ: ರಾಜ್ಯದೆಲ್ಲೆಡೆ ಬಿಸಿಲಿನ ತಾಪ ನಿಟ್ಟುಸಿರು ಬಿಡಿಸುತ್ತಿದೆ. ಕೆರೆ ಕುಂಟೆಗಳು ಬತ್ತು ಹೋಗಿವೆ… ಇದೊಂದು ಕಡೆಯಾದ್ರೆ, ಇನ್ನೊಂದು ಕಡೆ ಲಕ್ಷಾಂತರ ಮೀನುಗಳು ಸತ್ತು ತೇಲುತ್ತಿವೆ. ಇದ್ದ ಅಲ್ಪ ಸ್ವಲ್ಪ ಕೊಳಕಾದ ನೀರಲ್ಲಿ ಅರೆ ಜೀವ ಹಿಡ್ಕೊಂಡು ವಿಲ ವಿಲ ಒದ್ದಾಡುತ್ತ ತನ್ನ ಕೊನೆ ಉಸಿರು ಚೆಲ್ಲುತ್ತಿವೆ.
ಇಂತಹ ಮನಕಲುಕುವ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕನ್ನಮೇಡಿ ಕೆರೆಯಲ್ಲಿ. 108 ಎಕರೆ ವಿಸ್ತೀರ್ಣ ಹೊಂದಿರುವ ಕನ್ನಮೇಡಿ ಕೆರೆ ತುಂಬಿದರೆ ಜನ ಜಾನುವಾರು ಜಲಚರಗಳಿಗೆ ಜೀವ ಜಲವಾಗಿರುತಿತ್ತು. ಆದರೆ, ಇಂದು ಬತ್ತಿ ಹೋದ ಕೆರೆಯಲ್ಲಿ ಇದ್ದ ಅಲ್ಪ ಸ್ವಲ್ಪ ನೀರಲ್ಲಿ, ಲಕ್ಷಾಂತರ ಮೀನುಗಳು ಉಸಿರುಗಟ್ಟಿ ಸಾಯುತ್ತಿರುವ ದೃಶ್ಯ ನಿಜಕ್ಕೂ ನೋಡೋರನ್ನು ಕರುಳು ಹಿಂಡುವಂತೆ ಮಾಡುತ್ತದೆ.
ತಾಪದ ಹೆಚ್ಚಳ ಹೀಗೆ ಮುಂದುವರೆದರೆ, ಸಂಪೂರ್ಣ ನೀರು ಬತ್ತಿ ಹೋಗಿ ಇನ್ನೆರಡು ದಿನಗಳಲ್ಲಿ ಇದ್ದ ಬದ್ದ ಮೀನುಗಳು ಸಾಯೋದ್ರಲ್ಲಿ ಯಾವುದೇ ಸಂಶಯವಿಲ್ಲ.. ಕೇವಲ ಇದೊಂದೆ ಅಲ್ಲಾ, ಎಷ್ಟೋ ಜಾನುವಾರುಗಳು ಮೇವು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಪ್ರಾಣ ಬಿಡುತ್ತಿವೆ.
ಸಾವಿನ ಸಂಖ್ಯೆ ಹೆಚ್ಚಾಗುವ ಮುನ್ನಾ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಬರೀ ಚುನಾವಣೆ ಚುನಾವಣೆ, ಮತ ಬೇಟೆ ಎಂದು ಕಾಲ ಕಳೆಯುವ ನಡುವೆ ಬಿಸಿಲ ಕಾವಿನಲ್ಲಿ ತತ್ತರಿಸುತ್ತಿರುವ ಜನ ಜಾನುವಾರುಗಳ ಆರ್ತನಾದ ಆಲಿಸಿ, ನೀರು ಮೇವು ಒದಗಿಸುವ ಪರಿಹಾರ ಕಲ್ಪಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296