ತುಮಕೂರು: ನಮ್ಮ ತಂದೆ ಕಾಲದ ರಂಗಭೂಮಿ ಇಂದು ನೋಡಲು ಸಾಧ್ಯವಿಲ್ಲ. ಇಂದಿನ ರಂಗಭೂಮಿಯಲ್ಲಿ ಬರೀ ಭಾವನೆಗಳನ್ನು ಸರಮಾಲೆಯಲ್ಲಿಯೇ ಹಿಡಿದಿಡಲಾಗುತ್ತಿದೆ. ಅಂತಹ ರಂಗಭೂಮಿ ಬೆಳೆದು ನಿಲ್ಲುವುದಾದರೂ ಹೇಗೆ? ಎಂಬ ಬೃಹದಾಕಾರದ ಪ್ರಶ್ನೆಗಳು ಹೆಮ್ಮರವಾಗಿ ಬೆಳೆಯುತ್ತಿರುವುದಕ್ಕೆ ಈ ಹೊತ್ತಿನ ಕುಟುಂಬಗಳೇ ಸಾಕ್ಷಿಎಂದು ಸಿಂಡಿಕೇಟ್ ಸದಸ್ಯರು ಹಾಗೂ ಹಿರಿಯ ಪ್ರಾಧ್ಯಾಪಕರು ಆಗಿರುವ ತುಮಕೂರು ವಿಶ್ವವಿದ್ಯಾನಿಲಯದಪ್ರೊ. ಪರಶುರಾಮ ಕೆ.ಜಿ. ಹೇಳಿದರು.
ತುಮಕೂರಿನ ಸದಾಶಿವನಗರದಲ್ಲಿರುವ ಬೆಳ್ಳಿ ರಂಗ ಮನೆಯಲ್ಲಿ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತುಮಕೂರು, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಇವರುಗಳ ಸಹಕಾರದಲ್ಲಿ 27 ಮಾರ್ಚ್ 2025 ರಂದುಗುರುವಾರ ಸಂಜೆ 4 ಗಂಟೆಗೆ ಏರ್ಪಡಿಸಿದ್ದ “ವಿಶ್ವರಂಗಭೂಮಿ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಖಾಸಗೀಕರಣ, ಉದಾರೀಕರಣದ ಸಂದರ್ಭದಲ್ಲಿ ಬದುಕುತ್ತಿರುವ ನಾವುಗಳು ರಂಗಭೂಮಿಯನ್ನು ವ್ಯವಹಾರೀಕರಣವಾಗಿಸುತ್ತಿರುವ ನಮ್ಮ ಕಲಾವಿದರು ಬೆಳೆಯುವುದಾದರೂ ಹೇಗೆ? ಎಂದು ಪ್ರಶ್ನಸಿದರು. ಇದಕ್ಕೆ ಕಾರಣಗಳು ಬೇಕಾದಷ್ಟಿರಬಹುದು. ಆದರೆ ನೈಜವಾದ ನಾಟಕಗಳ ಪ್ರಯೋಗ ನೀಡಿದ/ನೋಡಿದ ಗುಬ್ಬಿ ಕಂಪನಿಯಾಗಲಿ, ಸುಬ್ಬಯ್ಯನಾಯ್ಡು ಕಂಪನಿಯಾಗಲಿ, ಆರ್. ನಾಗರತ್ನಮ್ಮನವರ ಕಂಪನಿಯಾಗಲಿ, ಹಿರಣ್ಣಯ್ಯ ಮಿತ್ರ ಮಂಡಲಿಗಳ ರಂಗಭೂಮಿ ಪ್ರತಿಭೆಗಳಾದ ಡಾ. ರಾಜಕುಮಾರ್. ಬಾಲಕೃಷ್ಣ, ನರಸಿಂಹರಾಜು, ಜಿ.ವಿ. ಅಯ್ಯರ್ ಮಾಸ್ಟರ್ ಹಿರಣ್ಣಯ್ಯ ಮುಂತಾದ ಹೆಸರಾಂತ ಕಲಾವಿದರ ಪಾಡೇನಾಗಬೇಕು ಎಂದು ನಾವುಗಳು ಚಿಂತಿಸಬೇಕಾಗಿದೆ.
ಅಷ್ಟೆ ಅಲ್ಲದೆ ಈ ಹೊತ್ತು ನಮ್ಮ ನಮ್ಮಗಳ ಜೊತೆಜೊತೆಯಲ್ಲಿಯೇ ಕಲಾವಿದರಾಗಿ ಬದುಕು ಸಾಗಿಸುತ್ತಿರುವ ಉಮಾಶ್ರೀಯವರಾಗಲಿ, ರಂಗಾಯಣ ರಘುವಾಗಲಿ ಅಥವಾ ಹೆಚ್.ಎಂ. ರಂಗಯ್ಯನವರಂತಹ ಹಿರಿಯಕಲಾವಿದರು ಯಾವುದೇ ಸ್ವಾರ್ಥವಿಲ್ಲದೆ ಕಟ್ಟಿಕೊಂಡಿರುವ ಈ ಆಪ್ತ ರಂಗಮಂದಿರವಾಗಲಿ ಅವರು ಪಡೆದುಕೊಂಡಿರುವ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ರಂಗಮನೆಯಲ್ಲಿ ನೀಟಾಗಿ ಜೋಡಿಸಿರುವುದನ್ನು ನೋಡಿದರೇ ಸಾಕು ಬದುಕು ಸಾರ್ಥಕವೆನಿಸುವುದರಲ್ಲಿ ಯಾವುದೇ ಕೀಳರಿಮೆ ಪಡಬೇಕಾಗಿಲ್ಲ ಎಂದು ಭಾವಿಸುತ್ತೇನೆ. ಸಮಾಕಾಲೀನ ಕಲಾವಿದರಾಗಲಿ ಪ್ರಸ್ತುತ ಸಮಾಜದಲ್ಲಿ ಹೇಗೆ ತಮ್ಮ ಎಂದಿನ ರಂಗದ ಬದುಕನ್ನು ಕಟ್ಟಿಕೊಳ್ಳಬೇಕು? ಬಹುಶಃ ಇವರುಗಳ ನಂತರ ವಿಶ್ವರಂಗಭೂಮಿ ದಿನಾಚರಣೆ ಏರ್ಪಡಿಸುವ ಕಲಾವಿದರ ಗುಂಪೇ ಅವನತಿ ಹೊಂದುತ್ತದೆಂಬ ಭಾವನೆ ಮೂಡುವುದರಲ್ಲಿ ಸಂದೇಹವೇ ಇಲ್ಲ!? ಎನ್ನುವಂತಾಗಿದೆ ಎಂದರು.
ಆದರೆ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೇರಳವಾಗಲಿ, ತುಳುನಾಡಾಗಲಿ, ಮಹಾರಾಷ್ಟ್ರವಾಗಲಿ ಅಥವಾ ನಮ್ಮ ರಾಜ್ಯದ ಮಂಗಳೂರಾಗಲಿ, ಉತ್ತರಕನ್ನಡವಾಗಲಿ, ದಕ್ಷಿಣ ಕನ್ನಡವಾಗಲಿ ಹಿಂದೆ ಬಿದ್ದಿಲ್ಲ. ಕಷ್ಟಪಟ್ಟು ಕಲಿಯುತ್ತಾರೆ, ಪ್ರಯೋಗ ನೀಡುತ್ತಾರೆ, ಬೆಳಗಾದರೂ ಪ್ರೇಕ್ಷಕರು ಕದಲುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿಎಂದರು. ನಾವು ಭಾವನಾತ್ಮಕ ಸಮಾಜವನ್ನು ಕಟ್ಟದಿದ್ದರೆ ಮನುಷ್ಯ ಸಂಬಂಧಗಳು ನಾಶವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅದಕ್ಕೆ ನಮ್ಮ ಕಲಾವಿದರು ಹಿರಿಯ ರಂಗಕರ್ಮಿಗಳ ಮಾರ್ಗದರ್ಶನ ಅತ್ಯವಶ್ಯಕವಾಗಿ ಬೇಕಾಗಿದೆ. ಇಂದಿನ ಮಕ್ಕಳಲ್ಲಿ ಭಾವನಾತ್ಮಕ ಸಂಸ್ಕೃತಿ ಹೇರಳವಾಗಿರುತ್ತದೆ. ಅದನ್ನುರಂಗಯ್ಯ ಸರ್ ಮೊಮ್ಮಗಳು ನೀಡಿದ ಭರತನಾಟ್ಯವೇ ಸಾಕ್ಷಿ. ಎಂಟು ವರ್ಷದಲ್ಲಿರುವ ಈ ಮಗು ಪಿ.ಜಿ.ಗೆ ಬರುವಷ್ಟರಲ್ಲಿ ಅವಳಲ್ಲಿರುವ ಭಾವನೆಗಳು ಹಾಳಾಗಿ ಬೇರೆಯಾಗಿಯೇ ಕಾಣಸಿಗುತ್ತಾಳೆ. ಎಂತಹ ನೋವಿನ ಸಂಗತಿ ನೋಡಿ, ಇದಾಗದಂತಿರಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತೇನೆಂದರು.
ಇದೇ ಸಂದರ್ಭದಲ್ಲಿ ಡಾ.ಗುಬ್ಬಿವೀರಣ್ಣಕಲಾಕ್ಷೇತ್ರದಲ್ಲಿ ಸತತ 30 ವರ್ಷಗಳಿಂದಲೂ ಧ್ವನಿವರ್ಧಕ ನಿರ್ವಾಹಕರಾಗಿರುವ ಬಿ.ಆರ್.ರಾಜೇಗೌಡ ಮತ್ತು ಬೆಳಕು ನಿರ್ವಾಹಕರಾಗಿರುವ ಎನ್. ರಮೇಶ್, ಧ್ವನಿ ಮತ್ತು ಬೆಳಕಿನ ವಿಶೇಷ ತಜ್ಞರಾಗಿರುವ ಡಿ.ವಿ. ಸುರೇಶ್ಕುಮಾರ್ ಇವರುಗಳನ್ನು ಅಭಿನಂದಿಸಲಾಯಿತು.
ಅತಿಥಿಗಳಾಗಿ ಗುಬ್ಬಿ ಕಂಪನಿಯ ಕುಮಾರ್ ಗುಬ್ಬಿವೀರಣ್ಣ ಆಗಮಿಸಿದ್ದರು. ಸದರಿ ಸಮಾರಂಭದ ಅಧ್ಯಕ್ಷತೆಯನ್ನು ರಂಗಕರ್ಮಿ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು & ಶ್ರೀರಂಗ ರಂಗ ಹವ್ಯಾಸಿ ಕಲಾವೃಂದದ ಮುಖ್ಯ ಟ್ರಸ್ಟಿ ಗುರು ಹೆಚ್.ಎಂ. ರಂಗಯ್ಯನವರು ವಹಿಸಿದ್ದರು. ಕಲಾವೃಂದದ ಕಲಾವಿದರುಗಳು ಗೀತಗಾಯನ ನಡೆಸಿಕೊಟ್ಟರು. ಟ್ರಸ್ಟಿಗಳು, ಕಲಾವಿದ ಸ್ನೇಹಿತರು ಭಾಗವಹಿಸಿದ್ದರು. ಕಲಾವಿದ ಮೋಹನ್ಕುಮಾರ್ ಎಂ.ಕೆ. ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4