ತುಮಕೂರು: ನಗರದಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅಸಾದುಲ್ಲಾ ಷರೀಫ್ ಮತ್ತು ಅಯೂಬ್ ಪಾಷಾ ಶಿಕ್ಷೆಗೊಳಗಾದ ಅಪರಾಧಿಗಳು. ಕಳೆದ ಜೂನ್ 6 ರಂದು ತುಮಕೂರು ನಗರದ ಮರಳೂರು ದಿಣ್ಣೆಯ ಅಂಕಿತ ಶಾಲೆ ಬಳಿ ಟಾಟಾ ಸಫಾರಿ ವಾಹನದಲ್ಲಿ ಇಟ್ಟುಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಎನ್ ಪೊಲೀಸರು ಜಂಟಿ ದಾಳಿ ನಡೆಸಿ, ಆರೋಪಿಗಳಾದ ಅಸಾದುಲ್ಲಾ ಷರೀಫ್ ಮತ್ತು ಅಯೂಬ್ ಪಾಷಾನನ್ನು ವಶಕ್ಕೆ ಪಡೆದಿದ್ದರು. ಬಂಧಿತರಿಂದ 10 ಕೆ.ಜಿ 669 ಗ್ರಾಂ ಗಾಂಜಾ ಸೊಪ್ಪು ಹಾಗೂ 4.05 ಗ್ರಾಂ ಎಂಡಿಎಂಎ (MDMA) ಕ್ರಿಸ್ಟಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆ 1985ರ ಸೆಕ್ಷನ್ 20(ಬಿ)(2)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ (ಪ್ರಕರಣದ ಸಂಖ್ಯೆ: ಸ್ಪೆಷಲ್ ಕೇಸ್ 468/2022) ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅರುಣ್ ಅವರು ವಾದ ಮಂಡಿಸಿ, ಆರೋಪಿಗಳ ವಿರುದ್ಧ ಎಲ್ಲಾ ಅಗತ್ಯ ಸಾಕ್ಷ್ಯಾಧಾರಗಳು ಹಾಗೂ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಯಂತಕುಮಾರ್ ಅವರು ದಂಡಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 235(2) ಹಾಗೂ ಮಾದಕ ದ್ರವ್ಯಗಳು ಮತ್ತು ಮನೋವಿಕ್ಷಿಪ್ತ ವಸ್ತುಗಳ ಕಾಯ್ದೆ (NDPS) ಅಡಿಯಲ್ಲಿ ತೀರ್ಪು ಪ್ರಕಟಿಸಿದ್ದಾರೆ.
ಶಿಕ್ಷೆಯ ವಿವರ:
ಇಬ್ಬರೂ ಆರೋಪಿಗಳಿಗೆ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ.
ತಲಾ ₹20,000/- (ಇಪ್ಪತ್ತು ಸಾವಿರ ರೂಪಾಯಿ) ದಂಡ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




