ತುಮಕೂರು: ವಿಶ್ವವಿದ್ಯಾನಿಲಯವೆಂದರೆ ಕೇವಲ ಜ್ಞಾನವನ್ನು ವರ್ಗಾಯಿಸುವ ಕೇಂದ್ರವಲ್ಲ. ಅದು ಸುತ್ತಲಿನ ಸಮಾಜ ಹಾಗೂ ರಾಷ್ಟ್ರದ ಭಾವನೆಗಳನ್ನು ಪ್ರತಿಬಿಂಬಿಸಬೇಕು. ಸಮಕಾಲೀನ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ಬಾರಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಗುರುವಾರ ಆಯೋಜಿಸಿದ್ದ 21ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ಬಹುವಾಗಿ ಬೆಳೆದಿದೆ. ನಾವೀಗ ಜಾಗತಿಕ ಮಟ್ಟದಲ್ಲೂ ಅಲ್ಲ, ಜಗತ್ತಿನಾಚೆಗಿನ ಬ್ರಹ್ಮಾಂಡದ ಕುರಿತು ಯೋಚಿಸಬೇಕಾಗಿದೆ ಎಂದರು.
ಉನ್ನತ ಶಿಕ್ಷಣರಂಗದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳ ಪಾತ್ರ ಏನು ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ದೇಶದಲ್ಲಿ 1600 ವಿಶ್ವವಿದ್ಯಾನಿಲಯಗಳಿವೆ. ಜಾಗತಿಕ ರ‍್ಯಾಂಕಿಂಗ್ ನಲ್ಲಿ ಶ್ರೇಷ್ಠ 100 ವಿವಿಗಳ ಪೈಕಿ ಭಾರತದ ಒಂದು ವಿಶ್ವವಿದ್ಯಾನಿಲಯವೂ ಇಲ್ಲದಿರುವುದು ಯೋಚಿಸಬೇಕಾದ ಸಂಗತಿ ಎಂದರು.
ಸಾಮಾನ್ಯರಂತೆ ಇರುವ ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಏಕೆಂದರೆ ನೈಜ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ನಮ್ಮಲ್ಲಿ ಮಾಡಿದ ಸಂಶೋಧನೆಗಳದ್ದೇ ಪುನರಾವರ್ತನೆ ನಡೆಯುತ್ತದೆ. ಇದರಿಂದಾಗಿ ಭಾರತದ ವಿವಿಗಳಲ್ಲಿರುವ ಪ್ರಾಧ್ಯಾಪಕರಿಗೆ ನೊಬೆಲ್ ಪ್ರಶಸ್ತಿಗಳು ಬರುತ್ತಿಲ್ಲ ಎಂದರು.
ಇಂದು ಮಾಹಿತಿ ಎಲ್ಲೆಡೆ ಲಭ್ಯವಿದೆ. ವಿದ್ಯಾರ್ಥಿಗಳು ತರಗತಿಗಳಲ್ಲೇ ಎಲ್ಲವನ್ನು ತಿಳಿದುಕೊಳ್ಳುವ ಅನಿವಾರ್ಯತೆ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಅಭಿವೃದ್ಧಿ, ಆರ್ಥಿಕತೆ ಮೊದಲಾದ ರಂಗಗಳಲ್ಲಿ ನಮ್ಮನ್ನು ನಾವು ಸ್ವಾವಲಂಬಿಗಳನ್ನಾಗಿ ಮಾಡುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ನಮ್ಮ ವಿಶ್ವವಿದ್ಯಾನಿಲಯವು ಇಪ್ಪತ್ತೊಂದರ ತರುಣನಾಗಿದೆ. ಪರಿಶ್ರಮದಿಂದ ಸಾಧನೆಗಳನ್ನು ಮಾಡಬೇಕಾದ ವಯಸ್ಸು ಇದು. ಈ ವಿಶ್ವವಿದ್ಯಾನಿಲಯವನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಜವಾಬ್ದಾರಿ ಎಲ್ಲ ಬೋಧಕ–ಬೋಧಕೇತರ ಸಿಬ್ಬಂದಿಗಳ ಮೇಲೆ ಇದೆ ಎಂದರು.
ವಿಶ್ವವಿದ್ಯಾನಿಲಯ ಒಬ್ಬರಿಂದ ನಿರ್ಮಾಣವಾದದ್ದಲ್ಲ. ಹಲವರ ಪರಿಶ್ರಮ ಇದರ ಹಿಂದಿದೆ. ಹಲವು ಬಗೆಯ ಅಡೆತಡೆಗಳನ್ನು ಬದಿಗೊತ್ತಿ ನಮ್ಮ ವಿವಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಹಿರಿಯ ಪ್ರಾಧ್ಯಾಪಕ ಪ್ರೊ.ಎಲ್.ಪಿ.ರಾಜು ವಿಶ್ವವಿದ್ಯಾನಿಲಯ ಸಾಗಿ ಬಂದ ದಾರಿಯ ಅವಲೋಕನ ನಡೆಸಿದರು. ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಸಿಂಡಿಕೇಟ್ ಸದಸ್ಯೆ ಪ್ರಿಯದರ್ಶಿನಿ, ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ಸಂಸ್ಥಾಪನಾ ದಿನಾಚರಣೆ ಸಮಿತಿ ಅಧ್ಯಕ್ಷ ಪ್ರೊ. ಮನೋಹರ ಶಿಂದೆ, ಸಂಚಾಲಕ ಡಾ.ಎ.ಎಂ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು. ವಿವಿ ಪ್ರಗತಿಪಥದ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಡಾ. ಸಿಬಂತಿ ಪದ್ಮನಾಭ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4