ಗುಬ್ಬಿ: ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್ ನಾಗಮೋಹನ್ ದಾಸ್ ಆಯೋಗದ ವರದಿ ತಕ್ಷಣವೇ ಜಾರಿಗೊಳಿಸಿ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಸಮಾಜದ ಗುರುಗಳಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ನಿವೃತ್ತ ನ್ಯಾಯಮೂರ್ತಿ ಹೆಚ್ .ಎನ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಇಂದಿಗೆ ಮೂರು ದಿವಸಗಳು ಕಳೆದರೂ ಇದುವರೆಗೂ ಸರ್ಕಾರ ನಮ್ಮ ಸಮುದಾಯದ ಬೇಡಿಕೆ ಈಡೇರಿಸುವಲ್ಲಿ ಮುಂದಾಗದಿರುವುದು ದುರಂತವೇ ಸರಿ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಸುಮಾರು ಪರಿಶಿಷ್ಟ ಪಂಗಡಕ್ಕೆ ಸೇರಿದ ನಾವುಗಳು ಸುಮಾರು 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಪ್ರಸ್ತುತ ದಿನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಸರ್ಕಾರಗಳು ಚುನಾವಣೆ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಹಿತ ಕಾಯುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯಗಳ ನಿರ್ಲಕ್ಷ ತಾಳುತ್ತಿರುವುದು ಎಷ್ಟು ಸರಿ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು 2019ರಲ್ಲಿ ರಚನೆ ಮಾಡಿದ್ದು ಆ ಅವಧಿಯಲ್ಲಿ ಇದ್ದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ 17 ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ 7.5 ಹೆಚ್ಚಿಸುವುದಾಗಿ ಭರವಸೆ ನೀಡಿದರು. ಇದುವರೆವಿಗೂ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರಗಳು ಪ್ರಸ್ತಾಪ ಮಾಡುತ್ತಿಲ್ಲ ಇಂದು ನಮ್ಮ ಸಮುದಾಯದ ಹೆಸರು ಹೇಳಿಕೊಂಡು ನಕಲಿ ಜಾತಿ ಪ್ರಮಾಣ ಸೃಷ್ಟಿಸಿ ಪ್ರಭಾವಿ ಅಧಿಕಾರಿಗಳು ಅಧಿಕಾರ ಪಡೆದುಕೊಂಡಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ, ಇಂದು ರಾಜ್ಯಾದ್ಯಂತ ಮೀಸಲಾತಿ ಹೆಚ್ಚಳ ಪಡಿಸುವ ನಿಟ್ಟಿನಲ್ಲಿ ವಾಲ್ಮೀಕಿ ಸಮುದಾಯದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದನ್ನು ಬೆಂಬಲಿಸಿ ಇಂದು ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಮುಂಭಾಗ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಬೃಹತ್ ಪ್ರತಿಭಟನೆಯನ್ನು ಏಕಕಾಲದಲ್ಲಿ ನಡೆಸಿ ಮನವಿಯನ್ನು ಸಲ್ಲಿಸುತ್ತಿದ್ದು, ಕೂಡಲೇ ಮುಖ್ಯಮಂತ್ರಿಗಳು ಶ್ರೀಗಳು ಧರಣಿ ಮಾಡುತ್ತಿರುವ ಸ್ಥಳಕ್ಕೆ ತೆರಳಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿಯನ್ನು 17ಕ್ಕೆ ಹೆಚ್ಚಿಸುವುದು ಹಾಗೂ ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಯನ್ನು ಹೆಚ್ಚಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಂವಿಧಾನದ ರಚನೆಯಲ್ಲಿ ನೀಡಿರುವ ಮೀಸಲಾತಿಯನ್ನು ನೀಡುತ್ತಿದ್ದಾರೆ. ವಿನಃ ಇದುವರೆಗೂ ಹೆಚ್ಚುವರಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜಾತಿಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸರ್ಕಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪಾದಯಾತ್ರೆಯನ್ನು ಕೊಳ್ಳುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಮಂಜೇಶ್ ಮಾತನಾಡಿ, ಇಂದು ಸರ್ಕಾರಗಳು ಪರಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕೇವಲ 2 ರಿಂದ 3ರಷ್ಟು ಇರುವಂತಹ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ನೀಡಿದ್ದೀರಿ.40 ರಿಂದ 50 ರಷ್ಟು ಇರುವ ನಮಗೆ ಕೇವಲ 15 ಮತ್ತು 3 ರಷ್ಟು ಮಾತ್ರ ಮೀಸಲಾತಿ ಕಲ್ಪಿಸಲಾಗಿದೆ. ಮೂಲ ವೃತ್ತಿ ಮಾಡುತ್ತಿದ್ದ ಚಪ್ಪಲಿ ಹೊಲೆಯುವ, ಚಮ್ಮಾರಿಕೆ ಮಾಡುವ, ಸತ್ತ ಹೆಣ ಹೊರುತ್ತಿದ್ದ ಅಂತಹ ಸಮುದಾಯಗಳಿಗೆ ಸೌಲಭ್ಯಗಳು ಮರೀಚಿಕೆಯಾಗಿದೆ. ಕೇವಲ ರಾಜಕೀಯ ದುರುದ್ದೇಶದಿಂದ ಎಲ್ಲಾ ಸಮುದಾಯದವರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಮುಂದುವರಿದ ಸಮುದಾಯದವರಿಗೆ ಮಾತ್ರ ಸೌಲಭ್ಯಗಳ ದೊರಕುವಂತಾಗಿದೆ. ದಲಿತರು ಅಸ್ಪೃಶ್ಯರಾಗಿ ಇಂದಿಗೂ ಸಹ ಸಮಾಜದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದೇಶದ ದುರಂತವಾಗಿದೆ. ಇನ್ನಾದರೂ ಸರ್ಕಾರಗಳು ಮೀಸಲಾತಿ ಹೆಚ್ಚಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆಯಲ್ಲಿ ಮುಖಂಡರಾದ ನಿವೃತ್ತ ಕೃಷಿ ಅಧಿಕಾರಿ ರಾಮಚಂದ್ರಪ್ಪ ಹಾಗೂ ಇತರ ಮುಖಂಡರುಗಳು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಇದ್ದು ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸೂಕ್ತ ದಾಖಲಾತಿಗಳನ್ನು ಸ್ಥಳ ಪರಿಶೀಲನೆ ನಡೆಸಿ ಪ್ರಮಾಣಪತ್ರಗಳನ್ನು ವಿತರಣೆ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮೀ ರಂಗಯ್ಯ, ಹೇರೂರು ನಾಗಣ್ಣ, ಸಾಗಸಂದ್ರ ದೇವರಾಜು, ರಘು, ಶೆಟ್ಟಿಹಳ್ಳಿ ಲಕ್ಷ್ಮಣ್, ಹಾಗಲವಾಡಿ ಶಂಕರ್, ನರಸಿಂಹ ಮೂರ್ತಪ್ಪ, ದೊಡ್ಡಗುಣಿ ಕೀರ್ತಿ, ಕುಮಾರ್, ಶ್ರೀನಿವಾಸ್, ಭಾಗ್ಯಮ್ಮ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಮತ್ತು ದಲಿತ ಮುಖಂಡರುಗಳು ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5