ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕ್ಯಾತಗಾನಕೆರೆ ಗ್ರಾಮದಲ್ಲಿ ಚರ್ಚ್ ಉದ್ಘಾಟನೆಯು ವಿವಾದಕ್ಕೆ ಕಾರಣವಾಗಿದೆ. ಗ್ರಾಮದ ಜನರು ಚರ್ಚ್ ನಿರ್ಮಾಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿಲಾನ್ಯಾಸ ಫಲಕವನ್ನು ಧ್ವಂಸಗೊಳಿಸುವ ಮೂಲಕ ಉದ್ಘಾಟನೆಯನ್ನು ತಡೆದಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸುರೇಶ್ ಎಂಬ ಪಾದ್ರಿ ಗ್ರಾಮದಲ್ಲಿ ವಾಸವಿದ್ದು, ಕ್ರೈಸ್ತ ಧರ್ಮದ ಬಗ್ಗೆ ಜನರಲ್ಲಿ ಮಾಹಿತಿ ಪಸರಿಸುತ್ತಿದ್ದರು. ಆದರೆ, ಅವರ ವಿರುದ್ಧ ಗ್ರಾಮದ ನಿರ್ವಾಹಕರ ಪತ್ನಿಯೊಂದಿಗಿನ ಅನುಚಿತ ವರ್ತನೆಯ ಆರೋಪ ಹೊರಿಸಲಾಗಿದೆ. ಈ ಆರೋಪಗಳನ್ನು ವ್ಯಕ್ತಪಡಿಸಿದ ಮಹಿಳೆಯ ಪತಿ, ಪಾದ್ರಿಯ ವರ್ತನೆ ಅವರ ಕುಟುಂಬದ ಜೀವನವನ್ನು ಹಾಳು ಮಾಡಿದೆ ಎಂದು ದೂರಿದ್ದಾರೆ.
ಸೋಮವಾರ ಉದ್ಘಾಟನೆಗೆ ಸಿದ್ಧವಾಗಿದ್ದ ಐಪಿಸಿ ಚಿಯೋನ್ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಲು ಉದ್ದೇಶಿಸಿದ್ದಾಗ, ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉದ್ಘಾಟನೆಗೆ ಸಿದ್ಧವಾಗಿದ್ದ ಶಿಲಾನ್ಯಾಸ ಫಲಕವನ್ನು ಧ್ವಂಸಗೊಳಿಸಿದರು.
ಗ್ರಾಮದ ಯುವಕ ಅನಿಲ್ ಮಾತನಾಡಿ, “ಪಾದ್ರಿ ಸುರೇಶ್ ನಮ್ಮ ಗ್ರಾಮದಲ್ಲಿ ಜನರನ್ನು ಮತಾಂಧತೆಯತ್ತ ಕರೆದುಕೊಂಡು ಹೋಗುತ್ತಿದ್ದಾರೆ. ನಮಗೆ ಗೊತ್ತಿಲ್ಲದೆ ಚರ್ಚ್ ನಿರ್ಮಿಸಿದ್ದಾರೆ. ಜೊತೆಗೆ ನನ್ನ ಸಹೋದರನ ಸಂಸಾರವನ್ನು ಹಾಳುಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಪರಿಸ್ಥಿತಿ ತೀವ್ರ ಬಿಗುವಿನ ವಾತಾವರಣಕ್ಕೆ ದಾರಿ ಮಾಡಿದ ಹಿನ್ನೆಲೆಯಲ್ಲಿ ಎಎಸ್ಪಿ ಅಬ್ದುಲ್ ಖಾದರ್, ಡಿಎಸ್ಪಿ ಮಂಜುನಾಥ್, ಸಿಪಿಐ ಸುರೇಶ್, ಗಿರೀಶ್, ಪಿಎಸ್ ಐ ಲಕ್ಷ್ಮಣ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಈ ಘಟನೆಯು ಗ್ರಾಮದಲ್ಲಿ ಉದ್ವಿಗ್ನತೆಯನ್ನುಂಟು ಮಾಡಿದರೆ, ಇದನ್ನು ಶಾಂತವಾಗಿಸಲು ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಮುಂದಾಗಿದೆ. ಘಟನೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4