ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಎದುರಿಸಲು ನಾವು ಸಿದ್ಧರಾಗಿದ್ದೇವೆ. ಬಿಜೆಪಿ ಮುಖಂಡರು ಬರೀ ಬುರುಡೆ ಬಿಡುತ್ತಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಜನ ನಂಬುವುದಿಲ್ಲ. ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಿಎಂ, ಡಿಸಿಎಂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಸಚಿವ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರಿಗೆ ಒಲವು ಇರುತ್ತದೆಯೋ ಅವರು ಅಭ್ಯರ್ಥಿ ಆಗುತ್ತಾರೆ. ಸ್ಥಳೀಯರು ಯಾರ ಹೆಸರು ಹೇಳುತ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ. ಮಹದೇವಪ್ಪ ಅವರ ಹೆಸರು ಹೇಳಿದರೂ ಮಹದೇವಪ್ಪಗೆ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಿದರು. ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಡಾಲಿ ಧನಂಜಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ನನಗೆ ಆ ಬಗ್ಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ಆಗಿಲ್ಲ ಎಂದರು.


