ತುಮಕೂರು: ನಿತ್ಯ ನೂರಾರು ಕುರಿಗಳು ಹಾಗೂ ದನಕರುಗಳಿಗೆ ಜೀವನಾಡಿಯಾಗಿದ್ದ ಗೋಕಟ್ಟೆಗೆ ತಂತಿ ಬೇಲಿ ಹಾಕಲಾಗಿದ್ದು, ನೇಜಂತಿ ಕೆರೆಯ ಹಳ್ಳವನ್ನು ಒತ್ತುವರಿ ಮಾಡಿಕೊಂಡು ಕಾರೆಹಳ್ಳಿಯಿಂದ ಬೆಜ್ಜಿಹಳ್ಳಿಗೆ ಹೋಗುವ ನಕಾಶೆ ರಸ್ತೆಗೆ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ತಂತಿ ಬೇಲಿ ಹಾಕಿದ್ದಾರೆ. ಇದನ್ನು ಸಂಬಂಧಪಟ್ಟ ಇಲಾಖೆಯವರು ಕಂಡೂ ಕಾಣದಂತಿದ್ದಾರೆ ಎಂದು ಕಂದಾಯ ಇಲಾಖೆ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಗೋ ಕಟ್ಟೆಗೆ ಹಾಕಿರುವ ತಂತಿಬೇಲಿ ತೆರವುಗೊಳಿಸುವಂತೆ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಒತ್ತಾಯಿಸಿದ್ದಾರೆ.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನೇಜಂತಿ ಸರ್ವೆ ನಂಬರ್. 19ರಲ್ಲಿ 20.ಎಕರೆ ಜಮೀನು ಖರೀದಿಸಿರುವ ಭೂಮಾಲಿಕ ಜಯಸಿಂಹ ಮತ್ತು ಇತರರು ಈ ಸರ್ವೇ ನಂಬರ್ ನಲ್ಲಿ ಕಳೆದ 50 ವರ್ಷಗಳಿಂದ ಗೋಕಟ್ಟೆ ಇದ್ದು, ನೇಜಂತಿ, ದ್ವಾರನ ಕುಂಟೆ, ವಾ ಜರಹಳ್ಳಿ, ಕಾರೆಹಳ್ಳಿ ಗ್ರಾಮಗಳ ಸಾವಿರಾರು ಕುರಿಗಳಿಗೆ ನೀರು ಕುಡಿಯಲು ಈ ಗೋ ಕಟ್ಟೆಯೇ ಅವಲಂಬಿತವಾಗಿತ್ತು. ಇದೀಗ ಭೂ ಮಾಲೀಕ ಇದು ನನ್ನ ಜಮೀನು ವ್ಯಾಪ್ತಿಯಲ್ಲಿ ಕಟ್ಟೆ ಬರುತ್ತದೆ, ಸರ್ವೇ ನಂಬರ್ 19 ರಲ್ಲಿ ಯಾವುದೇ ಕಾಲುದಾರಿ ರಸ್ತೆ ಬರುವುದಿಲ್ಲ ಎಂದು ದೌರ್ಜನ್ಯ ಮಾಡಿ ಕಂದಾಯ ಇಲಾಖೆ ಅಧಿಕಾರಿಗಳ ಸಹಾಯದಿಂದ ತಂತಿ ಮೇಲೆ ಹಾಕಿ ಸ್ಥಳೀಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಆರೋಪಿಸಿದ್ದಾರೆ.
ಯಾವುದೇ ಜಮೀನಿನಲ್ಲಿ ಗೋಕಟ್ಟೆ ಇದ್ದರೆ ಅದು ಸಾರ್ವಜನಿಕರ ದನ ಕರುಗಳ ಕುಡಿಯುವ ನೀರಿನ ಸಹಾಯಕ್ಕಾಗಿ ಇರುತ್ತದೆ. ಇಂತಹ ನಿಯಮಾವಳಿಗಳು ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿದ್ದರು, ಲ್ಯಾಂಡ್ ಮಾಫಿಯಾ ಜೊತೆ ಅಧಿಕಾರಿಗಳು ಕೈಜೋಡಿಸಿ ತಂತಿ ಬೇಲಿ ಹಾಕಲು ನೆರವಾಗಿದ್ದಾರೆ, ಇದಲ್ಲದೆ ಸರ್ಕಾರಿ ಹಳ್ಳ ಕೂಡ ಒತ್ತುವರಿ ಮಾಡಿ ತಂತಿ ಬೇಲಿ ಹಾಕಿರುವುದು ಅಧಿಕಾರಿಗಳ ತೀವ್ರ ನಿರ್ಲಕ್ಷದ ಫಲ ಎಂದು ರೈತರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಈ ಗೋಕಟ್ಟಿಗೆ ಹಾಕಿರುವ ತಂತಿ ಬೇಲಿ ತೆರವುಗೊಳಿಸಿ ಕುರಿ ದನಗಳಿಗೆ ನೀರು ಕುಡಿಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರೈತ ಸಂಘ ನೇಜಂತಿ ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯ ಲೋಕೇಶ್, ರೈತ ಮುಖಂಡರಾದ ನಾಗಣ್ಣ, ಸಾಹುಕಾರಪ್ಪ, ಕೃಷ್ಣಮೂರ್ತಿ, ಚಿಕ್ಕಣ್ಣ ,ನಾಗಣ್ಣ ಸರೋಜಮ್ಮ, ಮಂಜುಳಾ, ಕರಿಯಮ್ಮ, ಮಧು, ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4