ತುಮಕೂರು: ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ 119ನೇ ಜನ್ಮ ದಿನವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ವತಿಯಿಂದ ನಗರದ ಸರ್ವೋದಯ ಮೈದಾನ, ಹೈಸ್ಕೂಲ್ ಮೈದಾನ ಹಾಗೂ ಟೌನ್ ಹಾಲ್ ವೃತ್ತ ಸೇರಿದಂತೆ ವಿವಿಧ ಶಾಲಾ–ಕಾಲೇಜುಗಳು ಮತ್ತು ಹಳ್ಳಿಗಳಲ್ಲಿ ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಗತ್ ಸಿಂಗ್ ರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, “ಭಗತ್ ಸಿಂಗ್ ಅವರು ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ವಿಚಾರಗಳನ್ನು ಎಷ್ಟು ಪ್ರಬಲವಾಗಿ ಹರಡಿದ್ದರೆಂದರೆ, ಸಾವಿರಾರು ಯುವಕರು ಭಗತ್ ಸಿಂಗ್ ಹುತಾತ್ಮರಾದ ನಂತರವೂ ಅವರ ಆಶಯವನ್ನು ಈಡೇರಿಸಲು ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಬೀದಿಗಿಳಿದರು” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಸ್ವಾತಂತ್ರ್ಯವೆಂದರೆ ಕೇವಲ ಅಧಿಕಾರ ಬದಲಾವಣೆಯಲ್ಲ; ಪ್ರತಿಯೊಬ್ಬರಿಗೂ ಅನ್ನ ಬೆಳೆಯುವ ರೈತನ ಕುಟುಂಬ ಹಸಿವಿನಿಂದ ಸಾಯುವುದು, ವಿಶ್ವಕ್ಕೆ ಬಟ್ಟೆ ನೀಡುವ ನೇಕಾರನ ಮಕ್ಕಳಿಗೆ ಉಡಲು ಸೂಕ್ತ ಬಟ್ಟೆಯಿಲ್ಲದಿರುವುದು, ಭವ್ಯ ಅರಮನೆಗಳನ್ನು ಕಟ್ಟುವ ಶ್ರಮಿಕರು ಕೊಳಗೇರಿಗಳಲ್ಲಿ ಜೀವಿಸುವುದು ನಿಜವಾದ ಸ್ವಾತಂತ್ರ್ಯವಲ್ಲ. ಒಂದೆಡೆ ಶ್ರಮಿಕರ ಶೋಷಣೆಯಾದರೆ, ಇನ್ನೊಂದೆಡೆ ಬಂಡವಾಳಶಾಹಿಗಳು ತಮ್ಮ ಭೋಗಜೀವನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಇಂತಹ ಭೀಕರ ಅಸಮಾನತೆ ಮತ್ತು ಮಾನವನಿಂದ ಮಾನವನ ಶೋಷಣೆ ಇಲ್ಲದ ಸಮಾಜವನ್ನು ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ಭಗತ್ ಸಿಂಗ್ ಹೇಳಿದ್ದರು,” ಎಂದು ವಿವರಿಸಿದರು.
“ಆದರೆ ಇಂದು ಭಾರತದಲ್ಲಿ ಅವರ ಕನಸು ಇನ್ನೂ ಈಡೇರಿಲ್ಲ. ಹಸಿವಿನಿಂದ ಪ್ರಾಣ ಬಿಡುವ ಮಕ್ಕಳು, ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ ಹಾಗೂ ರೈತರ ಆತ್ಮಹತ್ಯೆಗಳು ಇಂದಿಗೂ ಮುಂದುವರಿದಿವೆ. ಇಂತಹ ಅನ್ಯಾಯಗಳ ವಿರುದ್ಧ ಹೋರಾಡಲು ಮತ್ತು ಭಗತ್ ಸಿಂಗ್ರ ಕನಸಿನ ಭಾರತವನ್ನು ಕಟ್ಟಲು ಯುವಜನರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಮುಂದೆ ಬರಬೇಕು,” ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ AIDSO ನ ಪದಾಧಿಕಾರಿಗಳಾದ, ಸೈಯದ್, ಹುಸನಪ್ಪ, ಪ್ರದ್ಯುಮ್ನ , ಯಶವಂತ, ಉಮೇಶ್, ವೃಷಭ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
