ತುಮಕೂರು: ಜಿಲ್ಲೆಯಲ್ಲಿ ಈವರೆಗೂ 182 ಡೆಂಗ್ಯೂ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಜನವಸತಿ ಪ್ರದೇಶಗಳಲ್ಲಿ ವಾರಕ್ಕೆರಡು ಬಾರಿ ಫಾಗಿಂಗ್, ಚರಂಡಿಗಳ ಸ್ವಚ್ಛತೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಡೆಂಗ್ಯೂ ಪ್ರಕರಣಗಳು ಜೂನ್ ಮಾಹೆಯಿಂದ ಸೆಪ್ಟೆಂಬರ್ ಮಾಹೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವುದರಿಂದ ಮಹಾನಗರ ಪಾಲಿಕೆ, ಆರೋಗ್ಯ, ಶಿಕ್ಷಣ ಇಲಾಖೆಗಳು ಸೇರಿದಂತೆ ಮತ್ತಿತರ ಇಲಾಖೆಗಳ ಸಹಭಾಗಿತ್ವದಲ್ಲಿ ಈಗಾಗಲೇ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ ಸುಮಾರು 5700 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು, ಸಾವುಗಳು ಸಂಭವಿಸಿವೆ. ಇದರಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ–ಚಿಕುಗುನ್ಯಾದಿದ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈವರೆಗೂ 3,305 ಶಂಕಿತ ಡೆಂಗ್ಯೂ ಪ್ರಕರಣಗಳ ಪೈಕಿ 1662ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 182 ಜನರಲ್ಲಿ ಡೆಂಗ್ಯೂ ಇರುವುದು ದೃಢಪಟ್ಟಿದೆ. ಜಿಲ್ಲೆಯ ಜನತೆ ಆರೋಗ್ಯದ ಹಿತದೃಷ್ಟಿಯಿಂದ ಡೆಂಗ್ಯು ನಿಯಂತ್ರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಾಲಿಕೆ, ಆರೋಗ್ಯ ಇಲಾಖೆ ಜಂಟಿಯಾಗಿ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, 148ಪ್ರಾಥಮಿಕ ಆರೋಗ್ಯ ಕೇಂದ್ರ, 3 ವೈದ್ಯಕೀಯ ಕಾಲೇಜು ಹಾಗೂ 1 ಸರ್ಕಾರಿ ಸೇರಿದಂತೆ 9 ಖಾಸಗಿ ಪ್ರಯೋಗಾಲಯಗಳಲ್ಲಿ ಡೆಂಗ್ಯೂ ಪರೀಕ್ಷೆ ಮಾಡಿಸಬಹುದಾಗಿದ್ದು, ಜನರು ಡೆಂಗಿ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಉದಾಸೀನ ಮಾಡದೆ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಬೇಕು. ಡೆಂಗ್ಯೂ ಪರೀಕ್ಷೆಗೆ ಖಾಸಗಿ ಆಸ್ಪತ್ರೆ/ಪ್ರಯೋಗಾಲಯಗಳು 300 ರೂ.ಗಳಿಗಿಂತ ಹೆಚ್ಚಿನ ದರ ಪಡೆದಲ್ಲಿ ಅಂತಹ ಆಸ್ಪತ್ರೆ/ ಪ್ರಯೋಗಾಲಯಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಆಸ್ಪತ್ರೆಗಳಲ್ಲಿ ಡೆಂಗಿ ಟೆಸ್ಟಿಂಗ್ ಕಿಟ್ ಹಾಗೂ ಔಷಧಿ ಕೊರತೆಯಿದ್ದಲ್ಲಿ ಹೊಸದಾಗಿ ಖರೀದಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದೃಢಪಟ್ಟ 182 ಡೆಂಗ್ಯೂ ಪ್ರಕರಣಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ 9ರೋಗಿಗಳು ಒಳರೋಗಿಯಾಗಿ ದಾಖಲಾಗಿದ್ದರು. ಈ ಪೈಕಿ ಐಸಿಯುನಲ್ಲಿ 1 ಮಗು ಸೇರಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಗುಣಮುಖರಾದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡಲು 20 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಗರ ವ್ಯಾಪ್ತಿಯ ೩೫ ವಾರ್ಡುಗಳ ಪೈಕಿ 6 ವಾರ್ಡ್ಗಳಲ್ಲಿ ಮಾತ್ರ ಕೇಂದ್ರ ಹಾಗೂ ರಾಜ್ಯದ 50:50 ಅನುಪಾತದ ಅನುದಾನದಡಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಉಳಿದ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಅನುದಾನ ಕಲ್ಪಿಸಲು ಮನವಿ ಮಾಡಲಾಗಿದ್ದು, ಹಣ ಬಿಡುಗಡೆಯಾದ ನಂತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದು ತಿಳಿಸಿದರು.
ನಗರದ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಅನುಕೂಲವಾಗುವಂತೆ ಕೆರೆಗಳ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಕೈಗೊಂಡ ಕ್ರಮಗಳ ಬಗ್ಗೆ ಪತ್ರಕರ್ತರೊಬ್ಬರು ದನಿ ಎತ್ತಿದಾಗ ಸ್ಪಂದಿಸಿದ ಸಚಿವರು, ನಗರದಲ್ಲಿ ಕುಡಿಯಲು ಯೋಗ್ಯವಿರುವ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅಮಾನಿಕೆರೆ ನೀರು ಕುಡಿಯಲು ಯೋಗ್ಯವಿಲ್ಲವೆಂದು ದೃಢಪಟ್ಟಿರುವುದರಿಂದ ಹೆಬ್ಬಾಕ, ಮರಳೂರು ಕೆರೆ ಸೇರು ನಗರದ ಸುತ್ತಮುತ್ತಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರು ಸಂಗ್ರಹಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಲಿಗೆ ಆಯುಕ್ತರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ನಕಲಿ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಸಚಿವರು ಜನರ ಜೀವನದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರನ್ನು ಬೆಳೆಯಲು ಬಿಡಬಾರದು. ಎಷ್ಟೇ ಪ್ರಭಾವಿತನಾಗಿದ್ದರೂ ಮುಲಾಜಿಲ್ಲದೆ ಪೊಲೀಸ್ ದೂರು ನೀಡಿ ದಸ್ತಗಿರಿ ಮಾಡಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಎನ್. ಮಂಜುನಾಥ ಅವರಿಗೆ ಸೂಚನೆ ನೀಡಿದರು. ಎಂದು ತಿಳಿಸಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಪಾಲಿಕೆಯಿಂದ ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡುವ ಹಾಗೂ ಸಂತಾನಹರಣ ಶಸ್ತçಚಿಕಿತ್ಸೆ ಮಾಡಿ ಕಾನೂನು ಪ್ರಕಾರ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಸಚಿವಾಲಯದಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸೊಳ್ಳೆಯಿಂದ ಹರಡುವ ಡೆಂಗ್ಯೂ ಮತ್ತು ಚಿಕುಂಗುನ್ಯಾ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಮನೆ-ಮನೆ ಲಾರ್ವಾ ಸಮೀಕ್ಷೆ ಮಾಡುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಠಾತ್ತನೆ ಬರುವ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತೆ ನೋವಿನಂತಹ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಲು ಅರಿವು ಮೂಡಿಸಲಾಗುತ್ತಿದೆ. ಮನೆಯಲ್ಲಿ ನೀರನ್ನು ಸಂಗ್ರಹಿಸುವ ತೊಟ್ಟಿ, ಡ್ರಂ, ಬ್ಯಾರಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ನೀರನ್ನು ಮುಚ್ಚಿಡಬೇಕು. ನೀರು ನಿಲ್ಲದಂತೆ ಸೊಳ್ಳೆ ಉತ್ಪತ್ತಿ ತಡೆಯುವ ಬಗ್ಗೆ ಎಚ್ಚರಿಕೆ ಸಂದೇಶಗಳನ್ನು ಜನ ಸಮುದಾಯಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಡೆಂಗ್ಯು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಸಚಿವ ಜಿ. ಪರಮೇಶ್ವರ ಮಾತನಾಡಿ ಡೆಂಗ್ಯು ಜ್ವರದ ರೋಗಲಕ್ಷಣ ಹಾಗೂ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಾಲ್ಲೂಕು ಮಟ್ಟದ ತರಬೇತಿ ಹಮ್ಮಿಕೊಳ್ಳಬೇಕು. ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತೀ ಮನೆ-ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಮಾಡಬೇಕು. ಎಲ್ಲ ಜನವಸತಿ ಪ್ರದೇಶ ಸೇರಿದಂತೆ ಶಾಲೆಗಳಲ್ಲಿ ವಾರಕ್ಕೆರಡು ದಿನ ಫಾಗಿಂಗ್ ಮಾಡಬೇಕು. ತುರ್ತು ಪರಿಸ್ಥಿತಿಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್ಲೇಟ್ಸ್ಗಳನ್ನು ಸಂಗ್ರಹವಿರುವಂತೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ರೋಗದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲವೆAದು ಅಧಿಕಾರಿಗಳು ಉದಾಸೀನ ಮಾಡದೆ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಬೇಕೆಂದರು.
ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಕಡ್ಡಾಯವಾಗಿ ಫಾಗಿಂಗ್ ಯಂತ್ರಗಳು ಲಭ್ಯವಿರಬೇಕು. ಫಾಗಿಂಗ್ ಯಂತ್ರಗಳ ಕೊರತೆಯಿದ್ದಲ್ಲಿ ಕೂಡಲೇ ಖರೀದಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಗೈರು ಹಾಜರಾದರೆ ಶಿಕ್ಷಕರು ಅನುಸರಣೆ ಮಾಡಿ ಜ್ವರ ಕಂಡು ಬಂದರೆ ಚಿಕಿತ್ಸೆ ಕೊಡಿಸುವಂತೆ ಮಕ್ಕಳ ಪಾಲಕರಿಗೆ ಮನವರಿಕೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆಗಾಗಿ ಎಲ್ಲಾ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದು, ಸುಮಾರು ೩ಲಕ್ಷ ಮೀಟರ್ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆಯಲ್ಲದೆ, ಮಧುಗಿರಿ ಚಿನ್ನೇನಹಳ್ಳಿ ಪ್ರಕರಣದ ನಂತರ ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಓವರ್‌ಹೆಡ್ ಟ್ಯಾಂಕ್ ಸ್ವಚ್ಛತೆ ಹಾಗೂ ನೀರನ್ನು ಪರೀಕ್ಷೆಗೊಳಪಡಿಸಲಾಗಿಯಲ್ಲದೆ ಈವರೆಗೆ ೯೦೬೦ ಕೊಳವೆ ಬಾವಿ ಹಾಗೂ ೫೬೫೦ ಸಿಸ್ಟನ್ ಸೇರಿ ೩೬,೦೦೦ ಜಲಮೂಲಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಜಿಲ್ಲಾ ಶಸ್ತçಚಿಕಿತ್ಸಕ ಡಾ: ಅಸ್ಗರ್‌ಬೇಗ್, ಮಲೇರಿಯಾ ಅಧಿಕಾರಿ ಡಾ: ಚಂದ್ರಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಪಾಲಿಕೆ ಆರೋಗ್ಯಾಧಿಕಾರಿ ಡಾ: ವೀರೇಶ್ ಕಲ್ಮಟ್, ವಿವಿಧ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA