ತುರುವೇಕೆರೆ: ಜೆಡಿಎಸ್ ಪಕ್ಷದಿಂದ ದೊಡ್ಡಘಟ್ಟ ಚಂದ್ರೇಶ್ ಟಿಕೆಟ್ ಕೇಳಲಿ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರ ನಡುವೆ ಜೆಡಿಎಸ್ ನಲ್ಲಿ ಗುಂಪುಗಾರಿಕೆ ಮಾಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ಹಾಗೂ ಎಸ್ ಬಿಆರ್ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಾನು ಜೆಡಿಎಸ್ ಪಕ್ಷಕ್ಕೆ ಬಂದಾಗ ತಾಲೂಕಿನಲ್ಲಿ 7 ಸಾವಿರ ಮತಗಳು ಪಕ್ಷಕ್ಕೆ ಬಂದಿದ್ದವು. ಸುಮಾರು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಈಗ 70 ಸಾವಿರಕ್ಕೂ ಹೆಚ್ಚು ಮತಗಳು ಬರುವ ಹಾಗೆ ಸಂಘಟನೆ ಮಾಡಿದ್ದೇನೆ. ಜೆಡಿಎಸ್ ಪಕ್ಷದಿಂದ ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ಸೋತಿದ್ದೇನೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಹಾಲಿ ಶಾಸಕರಿಗೆ ಮುಂದಿನ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಮಾತುಕತೆಯಾಗಿದೆ. ಚುನಾವಣೆ ಇನ್ನೂ 2 ವರ್ಷ ಇದೆ, ಅಭ್ಯರ್ಥಿ ವಿಚಾರ ಅಪ್ರಸ್ತುತ. ಆದರೂ ತಾಲೂಕಿನಲ್ಲಿ ಚಂದ್ರೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತುಗಳನ್ನು ಮುಖಂಡರು ಪ್ರಸ್ತಾಪಿಸಿದ್ದಾರೆ. ಟಿಕೆಟ್ ವಿಚಾರವಾಗಿ ನನಗೆ ಹಾಗೂ ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಮ್ ನಡುವೆ ಪೈಪೋಟಿ ಇದೆಯೇ ಹೊರತು ಚಂದ್ರೇಶ್ ರೊಂದಿಗೆ ಅಲ್ಲ, ಇದನ್ನು ಕಾರ್ಯಕರ್ತರು ಅರ್ಥಮಾಡಿಕೊಳ್ಳಿ ಎಂದರು.
ಎಸ್ ಬಿಆರ್ ಬಗ್ಗೆ ಆತಂಕ ಬೇಡ: ನಂತರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಬಿ.ಆರ್ ಬಗ್ಗೆ ಮಾತನಾಡಿ, 18 ವರ್ಷ ಪೂರ್ಣಗೊಳಿಸಿದ ನಾಗರಿಕರು, ಹೊಸ ಮತದಾರರು, ಹಿಂದೆ ಪಟ್ಟಿಯಿಂದ ತಪ್ಪಿಸಿಕೊಂಡವರು, ಅರ್ಹವಲ್ಲದ ಹೆಸರುಗಳನ್ನು ತೆಗೆದುಹಾಕುವುದು, ಮೃತ ವ್ಯಕ್ತಿಗಳ ಹೆಸರುಗಳು, ಎರಡು ಸ್ಥಳಗಳಲ್ಲಿ ನೋಂದಣಿಗಳು, ಶಾಶ್ವತವಾಗಿ ಸ್ಥಳಾಂತರ ಗೊಂಡವರ ಹೆಸರುಗಳು, ದೋಷಗಳನ್ನು ಸರಿಪಡಿಸುವುದು. ನ್ಯಾಯ ಸಮ್ಮತ ಚುನಾವಣೆಯನ್ನು ಮತ್ತು ನಕಲಿ ಮತದಾನ ತಡೆಯುವುದು ಹಾಗೂ ಮತದಾರರ ವಿಶ್ವಾಸವನ್ನು ಹೆಚ್ಚಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯ ಕಡೆ ಎಂದು ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಳಿ ಕರೆದುಕೊಂಡು ಹೋಗಿ, ಎನ್.ಡಿ.ಎ. ಮೈತ್ರಿಯಾಗಿದ್ದು ಮುಂದೆ ರಾಜ್ಯದಲ್ಲಿ ಎನ್.ಡಿ.ಎ. ಸರ್ಕಾರ ಬಂದರೆ ಮಂತ್ರಿಯಾಗುವ ಅವಕಾಶ ಇದೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಸೂಚಿಸಿದರು. ನಾನು ತಾಲೂಕು ಜೆಡಿಎಸ್ ನ ಅಘೋಷಿತ ನಾಯಕ. ನನಗೆ ಪಕ್ಷ ಟಿಕೆಟ್ ನೀಡುವುದು ನಿಮಗೆ ಗೊಂದಲವಿದ್ದರೆ, ಕೇಂದ್ರ ಸಚಿವ ಕುಮಾರಸ್ವಾಮಿಯಿಂದ ಹೇಳಿಕೆ ಕೊಡಿಸುತ್ತೇನೆ ಎಂದರು.
ವಕೀಲರಾದ ಧನಪಾಲ್, ರಮೇಶ್‌ಗೌಡ, ಶಂಕರೇಗೌಡ, ವೆಂಕಟಾಪುರ ಯೋಗೇಶ್, ಚಂದ್ರೇಗೌಡ, ರಂಗನಾಥ್, ಮೂರ್ತಣ್ಣ ಸಿ.ಎಸ್.ಪುರ, ಲೀಲಾವತಿ ಗಿಡ್ಡಯ್ಯ, ನರಸೇಗೌಡ, ನಂಜೇಗೌಡ, ಜಯರಾಮ್, ತಿಮ್ಮೇಗೌಡ, ಎ.ಬಿ.ಜಗದೀಶ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


