ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರಾವಳಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಚಿತ್ರ ರಿಲೀಸ್ ಹತ್ತಿರವಾಗುತ್ತಿದ್ದಂತೆ ಚಿತ್ರತಂಡದಲ್ಲಿ ಎದ್ದಿರುವ ವಿವಾದವೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಇಡೀ ಗೊಂದಲ ಹಾಗೂ ವಿವಾದದ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಪ್ರಮುಖ ಅತಿಥಿ ಪಾತ್ರ ಮಾಡಿರುವ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಪ್ರೇಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.
ಗುರುದತ್ ಗಾಣಿಗಾ ನಿರ್ದೇಶನದ ‘ಕರಾವಳಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಬಂದು ಗಲಾಟೆ ಮಾಡಿದ್ದರು. ಇದರ ಬೆನ್ನಲ್ಲೇ ನಿರ್ದೇಶಕರು ಹಾಗೂ ಚಿತ್ರತಂಡದ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳು ಬಹಿರಂಗವಾಗಿ ಹೊರಬಂದಿದ್ದವು. ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುವ ಮೂಲಕ ವಿವಾದ ಸೃಷ್ಟಿಯಾಗಿತ್ತು.
ಇನ್ ಸ್ಟಾಗ್ರಾಂ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ ರಾಜ್:
ಈ ಘಟನೆಗಳ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ರಾಜ್ ಬಿ. ಶೆಟ್ಟಿ, ಚಿತ್ರರಂಗದಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “‘ಕೆಜಿಎಫ್’, ‘ಕಾಂತಾರ’ ಅಂತಹ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾದಾಗ ನಮ್ಮ ಕನ್ನಡದ ಸಿನಿಮಾ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಅದೇ ರೀತಿ ಚಿತ್ರರಂಗದಲ್ಲಿ ಇಂತಹ ವಿವಾದಗಳು ನಡೆದಾಗ ಮನಸ್ಸಿಗೆ ಅಷ್ಟೇ ನೋವಾಗುತ್ತದೆ ಮತ್ತು ಬೇಸರ ಉಂಟಾಗುತ್ತದೆ.” ಎಂದು ರಾಜ್ ಹೇಳಿದ್ದಾರೆ.
“ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಮುಖ್ಯವಲ್ಲ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ನಾವು ಈ ರೀತಿ ನಡೆದುಕೊಳ್ಳುತ್ತಿದ್ದೇವಲ್ಲ ಎಂಬುದು ನಿಜಕ್ಕೂ ಬೇಜಾರಿನ ಸಂಗತಿ. ಚಿತ್ರರಂಗದ ಒಬ್ಬ ಜವಾಬ್ದಾರಿಯುತ ಸದಸ್ಯನಾಗಿ ನಾನು ಇಡೀ ಪ್ರೇಕ್ಷಕ ವರ್ಗಕ್ಕೆ ದೊಡ್ಡ ಕ್ಷಮೆ ಕೇಳುತ್ತೇನೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಮತ್ತು ಜವಾಬ್ದಾರಿಯಿಂದ ವರ್ತಿಸುವ ಪ್ರಯತ್ನ ಮಾಡುತ್ತೇನೆ,” ಎಂದು ರಾಜ್ ಬಿ. ಶೆಟ್ಟಿ ಭಾವುಕರಾಗಿ ನುಡಿದಿದ್ದಾರೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಅವರು, “‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದು, ನನ್ನದು ಕೇವಲ ಅತಿಥಿ ಪಾತ್ರವಷ್ಟೇ. ಆದರೆ ಅದು ಕಥೆಗೆ ಬಹಳ ಮುಖ್ಯವಾದ ಪಾತ್ರ. ನಮ್ಮೊಂದಿಗೆ ಸಂಪದಾ, ಮಿತ್ರ, ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗಾ ಒಂದು ಒಳ್ಳೆಯ ಸಿನಿಮಾ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ,” ಎಂದು ತಿಳಿಸುವ ಮೂಲಕ ಸಿನಿಮಾ ನೋಡಲು ಪ್ರೇಕ್ಷಕರಲ್ಲಿ ವಿನಂತಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


