ತುಮಕೂರು: ಪ್ರಸ್ತುತ ಸಂದರ್ಭದಲ್ಲಿ ತುಮಕೂರು–ಅರಸೀಕೆರೆ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ನಿವಾರಣೆಗೆ ವೇದಿಕೆ ನಿರಂತರ ಶ್ರಮಿಸಿದೆ. ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳು ದೊರೆಯಬೇಕು ಎಂದು ಜಿಲ್ಲಾ ರೈಲು ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ತಿಳಿಸಿದರು.
ಭಾನುವಾರ ನಗರದಲ್ಲಿ ನಡೆದ ತುಮಕೂರು ಜಿಲ್ಲಾ ರೈಲು ಪ್ರಯಾಣಿಕರ ವೇದಿಕೆಯ 12ನೇ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗುಬ್ಬಿ, ನಿಟ್ಟೂರು, ಬಾಣಸಂದ್ರ, ತಿಪಟೂರು ಮತ್ತಿತರ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಾನ್ಯ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ. ಅಲ್ಲದೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸುವುದು ಎಂದೂ ತಿಳಿಸಿದರು.
ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಯಶವಂತಪುರಕ್ಕೆ ಹೊರಡುತ್ತಿರುವ ಮೆಮು ರೈನನ್ನು ಕೆಎಸ್ಆರ್ವರೆಗೆ ವಿಸ್ತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ವೀ. ಸೋಮಣ್ಣ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ ಎಂದು ಅವರು, ನಿಟ್ಟೂರು ಬಾಣಸಂದ್ರದಲ್ಲಿ ಕೆಲವು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಅಲ್ಲದೆ ಬೆಂಗಳೂರು, ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಲುಗಡೆ ಅಗತ್ಯವನ್ನು ಮನವರಿಕೆ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳಿಂದ ಪೂರಕ ಸ್ಪಂದನೆ ದೊರೆತಿದೆ.
ಈ ಬಗ್ಗೆ ಮುಂದಿನ ದಿನಗಳಲ್ಲಿ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು. ತುಮಕೂರಿನಿಂದ ಹಾಸನಕ್ಕೆ ನೇರ ರೈಲು ಸಂಪರ್ಕಕ್ಕೆ ಮನವಿ ಸಲ್ಲಿಸಲಾಗಿದೆ. ಸಂಜೆ 5 ಗಂಟೆ ಸುಮಾರಿಗೆ ಒಂದು ಮೆಮು ರೈಲು ಸಂಚಾರಕ್ಕೆ ಸಮಯ ಬದಲಾವಣೆ ಮಾಡಬೇಕಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಚಿವರ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ವೇದಿಕೆಯ ಮನವಿಗಳ ಪರಿಗಣನೆಗೆ ಸಚಿವರು ರೈಲ್ವೆ ಮಂಡಳಿಗೆ ಕಳುಹಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಕರಣಂ ರಮೇಶ್ ಸಭೆಗೆ ಮಾಹಿತಿ ನೀಡಿದರು.
ಹಿರಿಯ ಉಪಾಧ್ಯಕ್ಷ ಪರಮೇಶ್ ಸಿಂಧಗಿ ತುಮಕೂರು ಮೂಲಕ ಕಾರವಾರಕ್ಕೆ ರೈಲು ಸಂಪರ್ಕಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಬಾ. ಹ. ರಾಮಕುಮಾರಿ ಸೇರಿದಂತೆ ಎಲ್ಲ ಸದಸ್ಯರು ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸಲಹೆ ನೀಡಿದರು. ಜಂಟಿ ಕಾರ್ಯದರ್ಶಿ ರಾಮಾಂಜನೇಯ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ರವಿಶಂಕರ್ ವಂದಿಸಿದರು. ವೇದಿಕೆಯ ಎಲ್ಲ ಸದಸ್ಯರು ಮತ್ತು ಅವರ ಕುಟುಂಬದವರು ಸಭೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ, ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣನವರು ವೇದಿಕೆಯ ಕಾರ್ಯ ಚಟುವಟಿಕೆಗಳನ್ನು ಗಂಭೀರವಾಗಿ ಗಮನಿಸುತ್ತಿದ್ದು, ವೇದಿಕೆ ಬಗ್ಗೆ ಪೂರಕ ಮನೋಭಾವ ಹೊಂದಿದ್ದಾರೆ. ಇದರಿಂದ ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ವೇದಿಕೆ ವತಿಯಿಂದ ಸಲ್ಲಿಸಲಾಗುತ್ತಿರುವ ಮನವಿಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ರೈಲ್ವೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದಂತೆಯೇ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಲ್ಲಿ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಬಗೆಯೂ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಹು ವರ್ಷಗಳಿಂದ ಇರುವ ಸಮಸ್ಯೆಗಳು ಸಾಧ್ಯವಾದಷ್ಟು ಬೇಗನೇ ಪರಿಹಾರವಾಗುವ ಆಶಾಭಾವನೆ ವೇದಿಕೆಯದ್ದಾಗಿದೆ.
— ಕರಣಂ ರಮೇಶ್, ಅಧ್ಯಕ್ಷರು, ರೈಲು ಪ್ರಯಾಣಿಕರ ವೇದಿಕೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
