ಮಧುಗಿರಿ (ತುಮಕೂರು): ತಾಲೂಕಿನಾದ್ಯಂತ ಅಕ್ರಮವಾಗಿ ಮದ್ಯ ಸರಬರಾಜು ಮತ್ತು ಮಾರಾಟ ಜಾಲ ವ್ಯಾಪಕವಾಗಿ ನಡೆಯುತ್ತಿದ್ದು, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರು ನೀಡಿದ್ದ ದೂರಿನ ಬೆನ್ನಲ್ಲೇ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡಿದೆ. ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಮಧುಗಿರಿ ಉಪವಿಭಾಗದ ಅಬಕಾರಿ ಡಿವೈಎಸ್ಪಿ ದೀಪಕ್ ಅವರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಲಾಗಿದ್ದು, ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸಾಮಾಜಿಕ ಹೋರಾಟಗಾರರಾದ ಜಟ್ಟಿ ಅಗ್ರಹಾರ ನಾಗರಾಜು, ಮಹೇಶ್ ಮಧುಗಿರಿ, ರಫೀಕ್ ಪಾಷ ಹಾಗೂ ರವಿಕುಮಾರ್ ಅಶೋಕ್ ಕುಮಾರ್ ಅವರು ಈ ಬಗ್ಗೆ ಅಬಕಾರಿ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರಿಗೆ ಕೂಡಲೇ ಸ್ಪಂದಿಸಿದ ಅಬಕಾರಿ ಇಲಾಖೆಯ ಸೂಪರಿಂಟೆಂಡೆಂಟ್ ಸಂದೀಪ್ ಅವರು ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.
ಕಸಬಾ ಹೋಬಳಿ ಕೃಷ್ಣಯ್ಯನಪಾಳ್ಯದ ವಸಂತ್ ಕುಮಾರ್ ಬಿನ್ ಗಂಗರಾಜು ಹಾಗೂ ರಂಗಪ್ಪ ಬಿನ್ ಲೇಟ್ ಸಣ್ಣರಂಗಪ್ಪ ಎಂಬುವವರು ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ಭಾರಿ ಪ್ರಮಾಣದಲ್ಲಿ ಮದ್ಯವನ್ನು ಶೇಖರಿಸಿಟ್ಟು ಮಾರಾಟ ಮಾಡುತ್ತಿದ್ದಾರೆ. ಇವರಿಗೆ ‘ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್’ ಹಾಗೂ ‘ಶ್ರೀನಿವಾಸ ವೈನ್ಸ್’ ಅಂಗಡಿಯಿಂದ ಮದ್ಯ ಸರಬರಾಜಾಗುತ್ತಿದ್ದು, ಬಾರ್ ಮಾಲೀಕರು ಮತ್ತು ಸಿಬ್ಬಂದಿ ಆಟೋ ಹಾಗೂ ಟಾಟಾ ಏಸ್ (Tata Ace) ವಾಹನಗಳ ಮೂಲಕ ಪ್ರಮುಖ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದರು.
ಈ ಅಕ್ರಮ ಜಾಲ ಬಹಿರಂಗವಾಗಿ ನಡೆಯುತ್ತಿದ್ದರೂ ಮಧುಗಿರಿ ಅಬಕಾರಿ ಇನ್ಸ್’ಪೆಕ್ಟರ್ ಶ್ರೀಲತಾ ಹಾಗೂ ಸಿಬ್ಬಂದಿ ಮೌನ ವಹಿಸಿದ್ದು, ಇದು ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಶಾಮೀಲಾಗಿರುವುದನ್ನು ತೋರಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಅಕ್ಟೋಬರ್ 1 ರಂದು ಕೃಷ್ಣಯ್ಯನಪಾಳ್ಯದಲ್ಲಿ ಅಬಕಾರಿ ಅಧಿಕಾರಿಗಳು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದಾರೆ.
ಪ್ರಕರಣ 1: ಆರೋಪಿ ರಂಗಪ್ಪ
ಆರೋಪಿ ರಂಗಪ್ಪ ಕೆ.ಎಸ್. ಎಂಬಾತನ ಮನೆಯ ಹಿಂಭಾಗದ ಶೌಚಾಲಯದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 24.030 ಲೀಟರ್ ಮದ್ಯ ಹಾಗೂ 14.450 ಲೀಟರ್ ಬೀರ್ ಅನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಟ್ಟು 18,860 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ರಂಗಪ್ಪ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಅಬಕಾರಿ ಉಪ ನಿರೀಕ್ಷಕ ಕರಿಬಸಪ್ಪ ಸಿ. ಅವರು ಎಫ್ ಐಆರ್ (053/2026-27/0337SIE/1351143) ದಾಖಲಿಸಿದ್ದಾರೆ.
ಪ್ರಕರಣ 2: ಆರೋಪಿ ವಸಂತ್ ಕುಮಾರ್ ಬಂಧನ
ಅದೇ ಗ್ರಾಮದ ವಸಂತ್ ಕುಮಾರ್.ಕೆ.ಜಿ ಬಿನ್ ಗಂಗರಾಜು ಎಂಬಾತನ ಸ್ನಾನದ ಗೃಹ ಹಾಗೂ ಚಿಲ್ಲರೆ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ 3.300 ಲೀಟರ್ ಮದ್ಯ ಹಾಗೂ 29.900 ಲೀಟರ್ ಬೀರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 10,925 ರೂ. ಆಗಿದ್ದು, ಆರೋಪಿ ವಸಂತ್ ಕುಮಾರ್‌ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಹಾಗೂ ಮತ್ತೊರ್ವ ಆರೋಪಿ ಗಂಗರಾಜು ಪರಾರಿಯಾಗಿದ್ದಾನೆ. ಈ ಬಗ್ಗೆ ಅಬಕಾರಿ ನಿರೀಕ್ಷಕ ಲಂಕೇಹನುಮಯ್ಯ ಕೆ. ಅವರು ಪ್ರಕರಣ (016/2026-27/033768IE/1747339) ದಾಖಲಿಸಿಕೊಂಡಿದ್ದಾರೆ.
ಈ ಕೃತ್ಯಗಳು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 14, 15, 32(1), 34, 38(ಎ), 43 ರ ಸ್ಪಷ್ಟ ಉಲ್ಲಂಘನೆಯಾಗಿದೆ.
“ದೂರುದಾರರ ಮನವಿಯಂತೆ ತುಮಕೂರು ಅಬಕಾರಿ ಉಪ ಆಯುಕ್ತರ (DCE) ನಿರ್ದೇಶನದ ಮೇರೆಗೆ ತಕ್ಷಣವೇ ಕಾರ್ಯಾಚರಣೆ ನಡೆಸಲಾಗಿದೆ. ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಆರೋಪಿ ರಂಗಪ್ಪನ ಮೇಲೆ ಈ ಹಿಂದೆಯೂ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಯಾವ ಬಾರ್ ಮತ್ತು ಅಂಗಡಿಗಳಿಂದ ಈ ಅಕ್ರಮ ಮದ್ಯ ಸರಬರಾಜು ಮಾಡಲಾಗಿದೆ ಎಂಬುದರ ಕುರಿತು ಸಾಕ್ಷ್ಯಾಧಾರಗಳ ಸಮೇತ ತನಿಖೆ ಮುಂದುವರಿಸಿದ್ದು, ತಪ್ಪಿತಸ್ಥ ಸನ್ನದುದಾರರ (Licensees) ಮೇಲೆಯೂ ಪ್ರಕರಣ ದಾಖಲಿಸಲಾಗುವುದು. ಅಕ್ರಮ ಮದ್ಯ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.”
— ದೀಪಕ್, ಅಬಕಾರಿ ಡಿವೈಎಸ್ಪಿ
“ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಕೃಷ್ಣಯ್ಯನಪಾಳ್ಯ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತವಾಗಿ ವಿವಿಧ ಬ್ರ್ಯಾಂಡ್‌ಗಳ ಮದ್ಯವನ್ನು ಭಾರಿ ಪ್ರಮಾಣದಲ್ಲಿ ಶೇಖರಿಸಿಟ್ಟು ಮಾರಾಟ ಮಾಡಲಾಗುತ್ತಿದೆ. ‘ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್’ ಹಾಗೂ ‘ಶ್ರೀನಿವಾಸ ವೈನ್ಸ್’ ಲೈಸೆನ್ಸ್‌ದಾರರು ಆಟೋ ಮತ್ತು ಟಾಟಾ ಏಸ್ (Tata Ace) ವಾಹನಗಳ ಮೂಲಕ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಇದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(ಎ) ಹಾಗೂ 1968 ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.”
— ಜಟ್ಟಿ ಅಗ್ರಹಾರ ನಾಗರಾಜು, ಸಾಮಾಜಿಕ ಹೋರಾಟಗಾರ
ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ, ಮಧುಗಿರಿ ಅಬಕಾರಿ ವಲಯದ ಇನ್ಸ್‌ಪೆಕ್ಟರ್ ಶ್ರೀಮತಿ ಶ್ರೀಲತಾ ಅವರು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ. ಇದು ಅವರ ಕರ್ತವ್ಯ ಲೋಪ (Dereliction of Duty). ಆದ್ದರಿಂದ, ಅಕ್ರಮವಾಗಿ ಮದ್ಯ ಸರಬರಾಜು ಮತ್ತು ಮಾರಾಟ ಮಾಡುತ್ತಿರುವ ಗಂಧರ್ವ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಶ್ರೀನಿವಾಸ ವೈನ್ಸ್ ಮಾಲೀಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 32 ಹಾಗೂ 34 ರ ಅಡಿಯಲ್ಲಿ ತಕ್ಷಣವೇ ಪ್ರಥಮ ವರ್ತಮಾನ ವರದಿ (FIR) ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಟ್ಟಿ ಅಗ್ರಹಾರ ನಾಗರಾಜು ಆಗ್ರಹಿಸಿದ್ದಾರೆ.
ರಫೀಕ್ ಪಾಷ, ಮಧುಗಿರಿ ಮಹೇಶ್
“ಅಕ್ರಮ ಮದ್ಯ ಮಾರಾಟಕ್ಕೆ ಬಳಸಲಾಗುತ್ತಿರುವ ವಾಹನಗಳನ್ನು ತಕ್ಷಣವೇ ಜಪ್ತಿ ಮಾಡಬೇಕು ಹಾಗೂ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಲೈಸೆನ್ಸ್ (License) ರದ್ದುಗೊಳಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕು. ಅಲ್ಲದೆ, ಅಕ್ರಮ ಮದ್ಯ ಮಾರಾಟವನ್ನು ತಡೆಯದೆ, ಕರ್ತವ್ಯ ಲೋಪ ಎಸಗಿರುವ ಹಾಗೂ ಈ ಜಾಲಕ್ಕೆ ಸಹಕರಿಸುತ್ತಿರುವ ಮಧುಗಿರಿ ಅಬಕಾರಿ ಇನ್ಸ್‌ಪೆಕ್ಟರ್ ಶ್ರೀಲತಾ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ, ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು. ಒಂದು ವೇಳೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು.”
— ಮಹೇಶ್, ಅಶೋಕ್ ಕುಮಾರ್, ರಫೀಕ್ ಪಾಷ ಮತ್ತು ರವಿಕುಮಾರ್, ಸಾಮಾಜಿಕ ಹೋರಾಟಗಾರರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.