ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರಿಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು ಲೆಜೆಂಡರಿ ಸ್ಪಿನ್ನರ್. ದಶಕಗಳ ಕಾಲ ಟೀಮ್ ಇಂಡಿಯಾವನ್ನು ಆಳಿದ್ದ ಕುಂಬ್ಳೆ, 1999ರ ಫೆ.7ರಂದು ಪಾಕ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮಾಡಿದ 10 ವಿಕೆಟ್ ಗಳ ದಾಖಲೆಯನ್ನು ಯಾರಾದರೂ ಮರೆಯಲು ಸಾಧ್ಯವೇ? ಇವರು ಲೆಗ್ ಸ್ಪಿನ್‌ಗೆ ವೇಗ & ಬೌನ್ಸ್ ಸೇರಿಸಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದರು. ಹೀಗಾಗಿ ಸ್ಪಿನ್ ಮಾಂತ್ರಿಕನಿಗೆ ‘ಜಂಬೋ’ ಎನ್ನುವ ಅಡ್ಡಹೆಸರೂ ಇದೆ.
1970ರ ಅಕ್ಟೋಬರ್ 17ರಂದು ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ ಬೆಂಗಳೂರಿನಲ್ಲಿ ಜನಿಸಿದ್ದರು. ಇವರ ತಂದೆ ಕೃಷ್ಣಸ್ವಾಮಿ ಹಾಗೂ ತಾಯಿ ಸರೋಜ. ಪೋಷಕರು ಮೂಲತಃ ಕಾಸರಗೋಡು ಮೂಲದವರು. ಕುಂಬ್ಳೆ ಲೆಗ್ ಸ್ಪಿನ್ನರ್, ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರು. ಚೇತನಾ ಅವರನ್ನು ಕುಂಬ್ಳೆ ವಿವಾಹವಾಗಿದ್ದು, ದಂಪತಿಗೆ ಪುತ್ರ ಮಯಾಸ್, ಪುತ್ರಿ ಸ್ವಸ್ತಿ ಹಾಗೂ ಆರುಣಿಯನ್ನು ದತ್ತು ಪುತ್ರಿಯನ್ನಾಗಿ ಪಡೆದಿದ್ದಾರೆ.
ಜುಂಬೋ ಜೆಟ್ ಎಂದೇ ಹೆಸರಾಗಿದ್ದ ಅನಿಲ್ ಕುಂಬ್ಳೆ ಕ್ರಿಕೆಟ್ ಲೋಕದ ಅದ್ಭುತ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದರು. ತಮ್ಮ ಮಾಂತ್ರಿಕ ಸ್ಪಿನ್ ಬೌಲಿಂಗ್ ನಿಂದಾಗಿಯೇ ದಾಖಲೆಯ ವಿಕೆಟ್ ಪಡೆದ ಕೀರ್ತಿ ಇವರದ್ದಾಗಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅನಿಲ್ ಕುಂಬ್ಳೆ 530ಕ್ಕೂ ಅಧಿಕ ವಿಕೆಟ್ ಗಳನ್ನು ಕಿತ್ತಿದ್ದರು, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸೀಸ್ ಆಟಗಾರ ಶೇನ್ ವಾರ್ನ್ ಬಳಿಕ ಅತೀ ಹೆಚ್ಚು ವಿಕೆಟ್ ಪಡೆದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅನಿಲ್ ಕುಂಬ್ಳೆ. ಒಂದು ಟೆಸ್ಟ್ ಇನಿಂಗ್ಸ್ ನಲ್ಲಿನ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದ ವಿಶ್ವದ ಎರಡೇ ಬೌಲರ್ ಗಳಲ್ಲಿ ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ.