ತುಮಕೂರು: ಕರ್ನಾಟಕ ರಾಜ್ಯ ಹಿರಿಯ ನಾಗರೀಕರ ಸಂಘ, ಬೆಳಗಾವಿಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು, 2024-25ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರೀಕರ ಜಿಲ್ಲಾ ಸಂಘದ ಸಹಯೋಗದಲ್ಲಿ ನಡೆಸಲಾಯಿತು.
ಸಮಾರಂಭವನ್ನು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಮಲ್ಲಪ್ಪ ಮುದಕವಿ ಅವರು ಉದ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ಎ.ವೈ. ಬೆಂಡಿಗೇರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರೀಕರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುವುದರಿಂದ ಪರಸ್ಪರ ಸಂಬಂಧ-ಸಂಪರ್ಕಗಳು ಬೆಳೆದು ಸಂಘದ ಉನ್ನತಿಗಾಗಿ ಕೆಲಸ ಮಾಡಲು ಪ್ರೇರಣೆ ದೊರಕುತ್ತದೆ ಎಂದರು. ಸದಸ್ಯರನ್ನು ಹೆಚ್ಚಿಸಿಕೊಂಡು ಹಿರಿಯ ನಾಗರೀಕರಿಗೆ ಅಗತ್ಯವಿರುವ ಎಲ್ಲ ಬಗೆಯ ಸಹಾಯ ಸಹಕಾರ ನೀಡುವುದು, ಸರಕಾರದ ಯೋಜನೆಗಳನ್ನು ಹಿರಿಯ ನಾಗರೀಕರಿಗೆ ತಲುಪುವಂತೆ ಮಾಡುವುದು, ಜಿಲ್ಲಾ ಸಂಘಗಳು ಸರ್ವಿಸ್ ಸೆಂಟರ್ ಪ್ರಾರಂಭಿಸಿ ಅದರ ಮೂಲಕ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ದೊರೆಯುವಂತೆ ಮಾಡಬಹುದು ಎಂದರು.
ಇದೇ ವೇಳೆ ಖಜಾಂಚಿಯವರಾದ ಸುರೇಶ್ ಪಿ. ಭಜಂತ್ರಿ ಅವರು ಆಡಿಟ್ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು.
ತುಮಕೂರು ಜಿಲ್ಲಾ ನಿವೃತ್ತ ನೌಕರರ ಹಾಗೂ ಹಿರಿಯ ನಾಗರೀಕರ ಸಂಘದ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ ಅವರು ವಿಶ್ರಾಂತಿ ವೇತನದಾರರಲ್ಲದ ಹಿರಿಯ ನಾಗರೀಕರು ಬಹುತೇಕ ಜನ ಅತ್ಯಂತ ದುಃಸ್ಥಿತಿಯಲ್ಲಿದ್ದಾರೆ. ಸುಸ್ಥಿತಿಯಲ್ಲಿರುವ ಹಿರಿಯರನ್ನೇ ಮಕ್ಕಳು ಮತ್ತು ಕುಟುಂಬದವರು ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ಅಟ್ಟುತ್ತಿದ್ದಾರೆ. ಅನೇಕರು ಬೀದಿಪಾಲಾಗುತ್ತಿದ್ದಾರೆ. ಇವರಿಗೆ ಆಸರೆಯಾಗಲು ಹಿರಿಯ ನಾಗರೀಕರ ಇಲಾಖೆ ಮತ್ತು ಪಾಲನೆ ಪೋಷಣೆ ಕಾನೂನುಗಳನ್ನು ಬಲಪಡಿಸಬೇಕಾಗಿದೆ. ಈ ದಿಕ್ಕಿನಲ್ಲಿ ಜಿಲ್ಲಾ ಸಂಘ ಸತತ ಪ್ರಯತ್ನಿಸುತ್ತಿದೆ. ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳು ನಮಗೆ ಸ್ಪಂದಿಸಬೇಕಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಘಟಕ 07—01–2024 ರಂದು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಮತ್ತು ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಆಶ್ವೀಜಾ ಅವರುಗಳಿಂದ ಉದ್ಘಾಟನೆಗೊಂಡಿದ್ದು ಕಾರ್ಯಾರಂಭ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವಂತೆ ವಿನಂತಿಸಿದರು.
ತುಮಕೂರು ಜಿಲ್ಲಾ ಘಟಕದ ವತಿಯಿಂದ ರಾಜ್ಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಕೆಳಕಂಡ ಬೇಡಕೆಗಳನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕೆಂದು ಕೋರಿದರು.
- ಪೆನ್ಷನ್ ಹಣವನ್ನು ಆದಾಯ ತೆರಿಗೆಗೆ ಒಳಪಡಿಸದಂತೆ ತಿದ್ದುಪಡಿ ತರುವುದು.
- ರೈಲು ಪ್ರಯಾಣದಲ್ಲಿ ಹಿರಿಯ ನಾಗರೀಕರಿಗೆ ಹಿಂದೆ ಇದ್ದಂತೆ ರಿಯಾಯಿತಿ ಜಾರಿಗೆ ತರುವುದು.
- ಎಲ್ಲ ವೇಗದ ರೈಲುಗಳಲ್ಲಿಯೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ಬೋಗಿ ಅಳವಡಿಸುವುದು.
- ಪ್ರತೀ ದೊಡ್ಡ ರೈಲುನಿಲ್ದಾಣದಲ್ಲಿ ಹಿರಿಯ ನಾಗರೀಕರಿಗಾಗಿ ಸಹಾಯ ಕೇಂದ್ರ ಸ್ಥಾಪಿಸುವುದು.
- ರೈಲು ನಿಲ್ದಾಣಗಳಲ್ಲಿ ಚಿಕ್ಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು.
ನಿವೃತ್ತ ಶಿಕ್ಷಕಿ ಲೀಲಾವತಿ ಅವರು ಪ್ರಾರ್ಥಿಸಿದರು. ನಿವೃತ್ತ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ವೇದಿಕೆಯಲ್ಲಿ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಕುಸುಮಶೆಟ್ಟರು, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ರಂಗಪ್ಪರೆಡ್ಡಿ, ಅನಂತರಾಮಯ್ಯ, ರಾಜ್ಯ ಉಪಾಧ್ಯಕ್ಷರಾದ ಕೆ.ಎಂ. ಚಂದ್ರಶೇಖರ್, ವಿ. ಲಕ್ಷ್ಮೀನಾರಾಯಣ ಮುಂತಾದವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q