ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಕೊಲೆಯಾದ ವ್ಯಕ್ತಿಯನ್ನು ಇಮ್ತಿಯಾಜ್ ಅಹಮದ್ ಎಂದು ಗುರುತಿಸಲಾಗಿದೆ. ಇವರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು. ಇವರ ಪತ್ನಿ ಲಕ್ಷ್ಮೀ ಕೂಡ ಶಿಕ್ಷಕಿಯಾಗಿದ್ದರು. ಲಕ್ಷ್ಮೀಗೆ ಕೃಷ್ಣಮೂರ್ತಿ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಇಮ್ತಿಯಾಜ್‌ಗೆ ತಿಳಿದು, ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಲಕ್ಷ್ಮೀ, ಪ್ರಿಯಕರ ಕೃಷ್ಣಮೂರ್ತಿ ಜೊತೆ ಸೇರಿ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು.
2016ರ ಜುಲೈ 7ರಂದು ರಾತ್ರಿ ಲಕ್ಷ್ಮೀ ಮತ್ತು ಇಮ್ತಿಯಾಜ್ ನಡುವೆ ಜಗಳ ನಡೆದಿದೆ. ಈ ವೇಳೆ ಲಕ್ಷ್ಮೀ ತನ್ನ ಸ್ನೇಹಿತ ಕೃಷ್ಣಮೂರ್ತಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಕಬ್ಬಿಣದ ರಾಡ್‌ನಿಂದ ಇಮ್ತಿಯಾಜ್ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶಿವರಾಜ್ ಎಂಬಾತನ ಸಹಾಯ ಪಡೆದು ಮೃತದೇಹವನ್ನು ಭದ್ರಾ ನದಿಗೆ ಎಸೆದಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಕೆಳಗಿನ ಶಿಕ್ಷೆ ಪ್ರಕಟಿಸಿದ್ದಾರೆ:
ಲಕ್ಷ್ಮೀ (ಪತ್ನಿ) ಮತ್ತು ಕೃಷ್ಣಮೂರ್ತಿ (ಪ್ರಿಯಕರ): ಇಬ್ಬರಿಗೂ ಮರಣದಂಡನೆ (ಗಲ್ಲು ಶಿಕ್ಷೆ) ಹಾಗೂ ತಲಾ 13 ಲಕ್ಷ ರೂ. ದಂಡ ವಿಧಿಸಲಾಗಿದೆ.
ಶಿವರಾಜ್: ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಆರೋಪದ ಮೇಲೆ ಈತನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 10 ಲಕ್ಷ ರೂಪಾಯಿಯನ್ನು ಮೃತ ಇಮ್ತಿಯಾಜ್ ಅವರ ತಾಯಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಕೊಂದ ಪತ್ನಿಯ ಕೃತ್ಯಕ್ಕೆ ನ್ಯಾಯಾಲಯವು ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


