ಕೊರಟಗೆರೆ: ಭೀಕರ ಬಿಸಿಲಿನ ತಾಪಕ್ಕೆ ಬೃಹತ್ ಕಾಡ್ಗಿಚ್ಚು ಸೃಷ್ಟಿಯಾಗಿ, ಪ್ರವಾಸಿಗರ ಕಾರು ಬೆಂಕಿಯಲ್ಲಿ ಬೆಂದು ಹಾನಿಯಾಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದಲ್ಲಿ ನಡೆದಿದೆ.
ಶ್ರೀ ಕ್ಷೇತ್ರದ ಸಿದ್ದೇಶ್ವರ ದರ್ಶನಕ್ಕೆ ಎಂದು ಬಂದ ಬೆಂಗಳೂರು ಮೂಲದ ಭಕ್ತರು.. ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರು. ಇದಕ್ಕಿದ್ದಂತೆ ಕಾಡ್ಗಿಚ್ಚು ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮುಜರಾಯಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮೇಲೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯುರ್ವೇದಿಕ್ ದಿವ್ಯೌಷಧಿಗಳ ಕ್ಷೇತ್ರ, ಸಿದ್ದರ ತಪೋವನ, ಸಾಧು ಸಂತರ ತವರೂರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೃಷ್ಟಿಯಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಿದ್ದರಬೆಟ್ಟದಲ್ಲಿ ಇದ್ದು ಇಲ್ಲದಂತಿದೆ ಎಂಬ ಆಕ್ರೋಶ ಕೇಳಿ ಬಂದಿದೆ.
ಮುಜರಾಯಿ ಇಲಾಖೆ ವತಿಯಿಂದ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದ್ರೆ ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ಸ್ಥಳವೇ ಇಲ್ಲ. ಹೀಗಾಗಿ ರಸ್ತೆ ಬದಿ ವಾಹನ ನಿಲ್ಲಿಸಿ ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆ ಬೆಂಗಳೂರು ಮೂಲದ ಭಕ್ತರು ತೆರಳಿದ್ದರು.
ದೇವರ ದರ್ಶನ ಮುಗಿಸಿ ವಾಪಸ್ ಬಂದಾಗ ತಮ್ಮ ಕಾರು ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿರುವ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಕಾಡ್ಗಿಚ್ಚಿನಿಂದ ಕಾರು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಭಕ್ತರ ಪ್ರವಾಸಿಗರ ನೆರವಿಗೆ ಮುಜರಾಯಿ ಇಲಾಖೆ ಸಿಬ್ಬಂದಿಗಳು ಬಂದಿಲ್ಲ ಎಂದು ದೂರಲಾಗಿದೆ.
ಅರಣ್ಯ ಇಲಾಖೆಯ ವಾಚರ್ ಗಳು ಕಾರು ರಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊರಟಗೆರೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಹೆಚ್ಚಿನ ಹಾನಿಯನ್ನು ತಪ್ಪಿಸಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4