ಕುಣಿಗಲ್: ಮಹಿಳೆಯರ ಬದುಕಿಗೆ ಮಾರಕವಾಗಿರುವ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳು ಕಡ್ಡಾಯವಾಗಿ ಎಚ್ ಪಿವಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ರೋಗದಿಂದ ಮುಕ್ತರಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ಸ್ತನ, ಅಂಡಾಶಯ, ಶ್ವಾಸಕೋಶ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರ ಬದುಕು, ತಾಯಿಯ ಮರಣದಿಂದ ಆ ಕುಟುಂಬಗಳು ಆತಂಕಕ್ಕೆ ಕಾರಣವಾಗಿವೆ. ಮಹಿಳೆಯರು ಮೌನವಾಗಿ ಅನುಭವಿಸುವ ನೋವು, ಆ ಮಹಿಳೆಯರಿಗೆ ಗೊತ್ತು. ಕ್ಯಾನ್ಸರ್ ಬಗ್ಗೆ ಉದಾಸೀನ ಮಾಡಿದರೆ ರೋಗವು ಉಲ್ಬಣಗೊಂಡು ಆಸ್ಪತ್ರೆಗೆ ಬರುವಷ್ಟರಲ್ಲಿ ಕಾಯಿಲೆಯು ಗುಣಪಡಿಸಲಾಗದಂತಹ ಹಂತಕ್ಕೆ ತಲುಪಿದೆ. ಹೀಗಾಗಿ ಮಾರಕ ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸೋಂಕು ಭೀಕರ ಕಾಯಿಲೆಗೆ ಎಚ್ ಪಿವಿ ಲಸಿಕೆ ಹಾಕಲು ದೇಶದಲ್ಲಿ 2010ರಲ್ಲಿ ಪ್ರಾರಂಭಿಸಲಾಯಿತು. ಆದರೆ ಪರಿಣಾಮಕಾರಿಯಾಗಿ ಪ್ರಚಾರವಾಗದೆ ಮಹಿಳೆಯರಲ್ಲಿ ಜಾಗೃತಿ ಮೂಡಿಸದ ಕಾರಣ, ಈ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇದರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಎಚ್ ಪಿವಿ ಲಸಿಕೆಯನ್ನು ಜಾರಿಗೆ ತರುವುದರಿಂದ ಭವಿಷ್ಯದಲ್ಲಿ ಸುಮಾರು ಹತ್ತು ಲಕ್ಷ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದಾಗಿದೆ. ಈ ಲಸಿಕೆ ಅತ್ಯಂತ ಸುರಕ್ಷಿತ ಎಂದು ತಜ್ಞ ವೈದ್ಯರ ತಂಡ ಹೇಳಿದೆ. ಕೇವಲ ಒಂದು ಡೋಸ್ ಕೂಡ ಬಲವಾದ ರಕ್ಷಣೆ ನೀಡುತ್ತದೆ. ಲಸಿಕೆ ವಿತರಣೆಯನ್ನು ಸರಳಗೊಳಿಸಿ ಹೆಚ್ಚಿನ ಜನರಿಗೆ ತಲುಪಿಸುವುದರಿಂದ, ಮಹಿಳೆಯರ ಭವಿಷ್ಯದ ಕ್ಯಾನ್ಸರ್ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು.
ಮಹಿಳೆಯರ ರಕ್ಷಣೆ ಹಾಗೂ ಆರೋಗ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಹಲವು ಉಚಿತ ಆರೋಗ್ಯ ಶಿಬಿರವನ್ನು ಈಗಾಗಲೇ ಮಾಡಲಾಗಿದೆ ಎಂದು ಹೇಳಿದರು.
ಉಚಿತ ವ್ಯಾಕ್ಸಿನ್: ಎಚ್ ಪಿವಿ ವ್ಯಾಕ್ಸಿನ್ ಗೆ ಸುಮಾರು 25 ಸಾವಿರ ರೂ. ಖರ್ಚಾಗುತ್ತದೆ. ಆದರೆ ಇದನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಉಚಿತ ಆರೋಗ್ಯ ಶಿಬಿರ: ಕ್ಯಾನ್ಸರ್ ಕಾಯಿಲೆಗೆ ಸಂಬಂಧಪಟ್ಟಂತೆ ಕುಣಿಗಲ್ ತಾಲೂಕಿನಲ್ಲಿ ಇನ್ನು 15 ದಿನದ ಒಳಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಹಿಳೆಯರಿಗಾಗಿ ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಮಹಿಳೆಯರು ಭಾಗವಹಿಸಿ, ನುರಿತ ವೈದ್ಯರಿಂದ ತಪಾಸಣೆಗೆ ಒಳಗಾಗಿ, ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


