ಬಸವಣ್ಣನವರು ರಚಿಸಿದ ವಚನಗಳು ಸಮಾಜದಲ್ಲಿನ ಅಸಮಾನತೆ, ಜಾತಿಯತೆಯನ್ನು ತೊಡೆದು ಹಾಕಲು ಪ್ರೇರಕವಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡ ಮುನ್ನಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮೂಢನಂಬಿಕೆ, ಕಂದಾಚಾರ, ಸಮಾಜದ ಲೋಪ ದೋಶಗಳನ್ನು ತಿದ್ದುವ ಮೂಲಕ ಅಂದಿನ ಶರಣ ಸಮುದಾಯದ ನೇತೃತ್ವ ವಹಿಸಿದ ಬಸವಣ್ಣನವರ ಕೊಡುಗೆ ಅನನ್ಯವಾದುದು. ಸ್ತ್ರೀ ಅಸಮಾನತೆ ಯನ್ನು ಖಂಡಿಸಿ ಸ್ತ್ರೀಯರಿಗೂ ಸಮಾತೆಗೆ ಪ್ರೇರೇಪಿಸಿದರು ಎಂದು ತಿಳಿಸಿದರು.
ಬಸವಣ್ಣನವರ ವಚನಗಳು ಸಮಾಜದ ಶುದ್ದಿಯ ಆಂದೋಲನಕ್ಕೆ ಪ್ರೇರಣೆಯಾಗಿವೆ. ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆಯ ಮೂಲವಾದ ಅನುಭವ ಮಂಟಪ ಸ್ಥಾಪಿಸಿ ಜನಸಾಮಾನ್ಯರೆಲ್ಲರೂ ವರ್ಣ, ವರ್ಗ ಭೇಧವಿಲ್ಲದೆ ಒಂದೆಡೆ ಸೇರಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾನತೆಯ ಸಂಸ್ಕೃತಿಗೆ ಮುನ್ನುಡಿ ಬರೆದವರು ಎಂದರು.
ಬಸವಣ್ಣನವರ ತತ್ತ್ವ ಸಿದ್ದಾಂತಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ವ್ಯವಸ್ಥೆ, ಮಹಿಳೆಯರ ಸಮಾನತೆಗಾಗಿ ಹೋರಾಡಿದ ಮಹಾ ಪುರುಷ ಎಂದ ಅವರು ಇಂದಿನ ಯುವಪೀಳಿಗೆ ಆದರ್ಶ ಹಾಗೂ ಜೀವನಶೈಲಿಯಲ್ಲಿ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ಶೆಟ್ಟಿ ಮಾತನಾಡಿ ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶರಣ ಮಹಾಶಯರು, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಯನ್ನು ತಂದು ಗುರುತಿಸಿದವರು ಬಸವಣ್ಣನವರು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಎಸ್. ಪುಷ್ಪರಾಜ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಸದಸ್ಯ ಮಧುಕುಮಾರ್ ಅರಸ್, ಮುಖಂಡರುಗಳಾದ ಸೀತರಾಮಭರಣ್ಯ, ಪ್ರೇಮ್ ಕುಮಾರ್, ಈಶ್ವರಹಳ್ಳಿ ಮಹೇಶ್, ಕಾರ್ಯಾಲಯ ಕಾರ್ಯದರ್ಶಿ ದುರ್ಗೇಶ್, ಬಸವರಾಜ್ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296