ಶಿರಾ, ತಾವರೆಕೆರೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ. ಪ್ರಭು ಅವರು ಶಿರಾ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ–ಮನೆಗೊಂದು ಶುದ್ಧ ಕುಡಿಯುವ ನೀರು ಒದಗಿಸುವ ಗಂಗೆ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಭು ರವರು, ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಅಭಿಯಂತರರಿಗೆ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಟಾನ ಮಾಡುವಂತೆ ಎಚ್ಚರಿಕೆ ನೀಡಿದರು. ಕಾಮಗಾರಿಗಳಲ್ಲಿ ಬಳಸಲಾಗುವ ಎಲ್ಲಾ ಸಾಮಗ್ರಿಗಳು ನಿಗದಿತ ಗುಣಮಟ್ಟಕ್ಕನುಸಾರವಾಗಿರಬೇಕೆಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಹರ್ ಘರ್ ಜಲ್ ಘೋಷಣೆಗೆ ಮುನ್ನ, ಪೈಪ್ಲೈನ್ ಹಾಗೂ ಗೇಟ್ ವಾಲ್ವ್‌ಗಳ ಮಾಹಿತಿ ಹಾಗೂ ವಿಲೇಜ್ ಕೀ ಮ್ಯಾಪ್ ನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸುವಂತೆ ಆದೇಶಿಸಿದರು.
ಯೋಜನೆಯ ಅಂದಾಜುಪಟ್ಟಿಯಂತೆ ಎಲ್ಲ ಕೆಲಸಗಳನ್ನು ಶ್ರೇಷ್ಠ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಸ್ಟ್ಯಾಂಡ್ ಪೋಸ್ಟ್‌ಗಳ ನಿರ್ಮಾಣವನ್ನು ನಿಗಧಿತ ಅಳತೆಯಂತೆ ಮಾಡಲಾಗುವಂತೆ ಮತ್ತು ಯೋಜನೆ ಹೆಸರು ಉತ್ತಮ ಗುಣಮಟ್ಟದ ಬಣ್ಣದಲ್ಲಿ ಬರೆಯುವಂತೆ ಆದೇಶಿಸಿದರು.
ಈ ಸಭೆಯ ವೇಳೆ, ಶುದ್ಧ ಕುಡಿಯುವ ನೀರಿನ ಘಟಕವನ್ನು ಸಹ ಪರಿಶೀಲಿಸಿದ ಅವರು, ನೀರಿನ ಶುದ್ಧತೆಯನ್ನು ಕಾಪಾಡುವ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q