ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಅವರು ಕಮಲದ ಧ್ವಜ ಹಾಕಿದ್ದಾರೆ, ಬದುಕಿದ್ದು ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ರಾಜ್ಯದ ಜನರಿಗೆ ನಾವು ಹೇಳಿದಂತೆ ಮಾತು ಉಳಿಸಿಕೊಂಡಿದ್ದೇವೆ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತಕೊಡಿ ಎಂದು ಮನವಿ ಮಾಡಿದರು. ಮಂಡ್ಯ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತೆ. ಪುಟ್ಟರಾಜು ಟಿಕೆಟ್ ಗಾಗಿ ಕಾದು ಕುಳಿತಿದ್ದ, ಇದೀಗ ಗೋವಿಂದ. ಕುಮಾರಸ್ವಾಮಿ ಕಮಲದ ಧ್ವಜ ಹಾಕಿಕೊಂಡಿದ್ದಾರೆ. ಬದುಕಿದ್ದು ಸತ್ತಂತೆ ಎಂದರು. ಕಳೆದ ಬಾರಿ ಮೈತ್ರಿಯಂತೆ ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಆದರೆ ಈಗ ತಮ್ಮ ಅಧಿಕಾರ ತೆಗೆದವರ ಜೊತೆಯೇ ಕುಮಾರಸ್ವಾಮಿ ಹೋಗಿದ್ದಾರೆ” ಎಂದರು.
“ಹೆಚ್.ಡಿ. ಕುಮಾರಸ್ವಾಮಿ ಹಾಸನದಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ಮಂಡ್ಯಕ್ಕೆ ಬಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು, ಮಾಡಲಿ. ಬೆಂಗಳೂರು ಗ್ರಾಮಾಂತರದಲ್ಲಿ ಭಾವನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಎಲ್ಲಾ ಕಡೆ ನೀವೇ ನಿಂತರೆ ಕಾರ್ಯಕರ್ತರು ಏನು ಮಾಡುತ್ತಾರೆ” ಎಂದು ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.
ಇದಕ್ಕೂ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, “ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ʼವಿಷʼ ಹೇಳಿಕೆ ನೀಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ, ಅವರ ಸುದ್ದಿ ನನಗೆ ಅವಶ್ಯಕತೆ ಇಲ್ಲ. ಅಂಬರೀಷ್ ಅವರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದು ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ.
ನಾನು ಸುಮಲತಾ ಅವರ ವಿಚಾರಕ್ಕೆ ಇಂದು ಹೋಗಲ್ಲ, ನಾಳೆಯೂ ಹೋಗಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಲಿ, ಉತ್ತರ ಕೊಡುತ್ತೇನೆ. ಅವರು ಪಕ್ಷದ ಸಿದ್ಧಾಂತದಿಂದ ಹೊರಗೆ ಬರಲಿ, ಆನಂತರ ಮಾತನಾಡುವೆ” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296