ತುಮಕೂರು: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಶನಿವಾರ ನಗರದ ಪಿಎನ್ ಆರ್ ಪಾಳ್ಯದಲ್ಲಿ ಪಾಲಿಕೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಿಎನ್ ಆರ್ ಪಾಳ್ಯದಲ್ಲಿರುವ 50 ದಶ ಲಕ್ಷ ಮೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿ 7ಲಕ್ಷ ರೂ. ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು ನಿರ್ಮಿಸಲಾಗಿದ್ದು, ಪ್ರಯೋಗಾಲಯದಲ್ಲಿ ನಗರದ ನಾಗರಿಕರಿಗೆ ಸರಬರಾಜಾಗುವ ಮುನ್ನವೇ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಿಂದ ನೀರಿನಿಂದ ಹರಡುವ ಅನೇಕ ಜಲಜನ್ಯ ಖಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಸ್ಥಳದಲ್ಲಿ ಹಾಜರಿದ್ದ ರಾಸಾಯನ ತಜ್ಞ ಬಿ.ಕೆ.ದೇವರಾಜು ಪ್ರಯೋಗಾಲಯದಲ್ಲಿ ನೀರಿನ ತಾಪಮಾನ, ವಾಸನೆ, ಬಣ್ಣ, ರುಚಿ, ಪವರ್ ಆಫ್ ಹೈಡ್ರೋಜನ್(PH), ಟರ್ಬಿಲಿಟಿ, ಟಿಡಿಎಸ್, ಸಾಲಿಡ್, ಟೋಟಲ್ ಡಿಸಾಲ್ವ್ ಸೇರಿದಂತೆ ಭೌತಿಕ, ರಾಸಾಯನಿಕ ಹಾಗೂ ಜೈವಿಕ ನಿಯತಾಂಕ(Parameter)ಗಳನ್ನು ಪರೀಕ್ಷಿಸಲಾಗುವುದು ಎಂದು ನೀರಿನ ಗುಣಮಟ್ಟ ಪರೀಕ್ಷೆ ಕುರಿತು ಸಚಿವರಿಗೆ ವಿವರಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಪ್ರಸ್ತುತ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ. ಪಾಲಿಕೆ ವಾರ್ಡು, ಬುಗುಡನಹಳ್ಳಿ ಜಲಸಂಗ್ರಹಾಗಾರ ಸೇರಿದಂತೆ ಪ್ರತಿ ದಿನ 14 ನೀರಿನ ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ನಾಗರಿಕರಿಗೆ ನೀರು ಸರಬರಾಜು ಮಾಡುವ ಮುನ್ನ 6 ಹಂತದಲ್ಲಿ ಶುದ್ಧೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ನಂತರ ಸಚಿವರು ಪ್ರಯೋಗಾಲಯದಲ್ಲಿ ಇನ್‌ಕ್ಯೂಬೇಟರ್, ಮೈಕ್ರೋ ಬಯೋಲಜಿû ಕೊಠಡಿ, ಆಟೋಕ್ಲೇವ್, ರಾಸಾಯನಿಕ ನಿಯತಾಂಕಗಳ ಪರೀಕ್ಷಾ ಕೊಠಡಿ, ಸೂಕ್ಷö್ಮ ಜೀವಿಗಳ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಗುಣಮಟ್ಟದ ಪ್ರಾಯೋಗಿಕ ಪರೀಕ್ಷೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಇಂಜಿನಿಯರ್ ಸಂದೀಪ್, ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4