ತುಮಕೂರು: ಜಿಲ್ಲೆಯಲ್ಲಿರುವ ಜನವಸತಿ ಸೇರಿದಂತೆ ಎಲ್ಲಾ ಕುಟುಂಬಗಳಿಗೂ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮವಹಿಸುವಂತೆ ಕೇಂದ್ರ ಜಲ ಶಕ್ತಿ ಮಂತ್ರಾಲಯದ ಜಂಟಿ ನಿರ್ದೇಶಕ ಅರುಣ್ ಕೆಂಭಾವಿ ತಿಳಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಲ್ ಜೀವನ್ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ನಳ ಸಂಪರ್ಕ ಕಲ್ಪಿಸಲು ಗುಣಮಟ್ಟದ ಕಾಮಗಾರಿ ಅನುಷ್ಟಾನ ಮಾಡಿ, ನಿಗಧಿತ ದಿನಾಂಕದೊಳಗಾಗಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಬೇಕು. ಸಮುದಾಯಕ್ಕೆ ಅಗತ್ಯವಾದ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅವರು ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುತ್ತಿರುವ ಬಗ್ಗೆ ಛಾಯಾಚಿತ್ರಗಳ ಸಹಿತ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಇದೇ ವೇಳೆ ಕೇಂದ್ರ WASH ಸಮಾಲೋಚಕ ಅಜಯ್ ಕುಮಾರ್ ಸಕ್ಸೇನಾ ಜಿಲ್ಲೆಯಲ್ಲಿ ಫೆಬ್ರವರಿ 11 ರಿಂದ 13ರವರೆಗೆ ಪ್ರವಾಸ ಕೈಗೊಂಡು ಕಾಮಗಾರಿ ಪರಿಶೀಲನೆ ನಡೆಸಿದ ವಿವರಗಳನ್ನು ಸಭೆಗೆ ವಿವರಿಸಿದರು.
ಸಭೆಯಲ್ಲಿ ಉಪ ನಿರ್ದೇಶಕರು(ಅಭಿವೃದ್ದಿ), ಮುಖ್ಯ ಯೋಜನಾಧಿಕಾರಿ, ಕಾರ್ಯಪಾಲಕ ಇಂಜಿನಿಯರ್ ಹಾಗೂ ಎಲ್ಲಾ ತಾಲ್ಲೂಕುಗಳ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4