ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾದೇನಹಳ್ಳಿ ಗ್ರಾಮದ ಬಹುಜನರ ಆರಾಧ್ಯ ದೈವವಾದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಗುರುವಾರದಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅತ್ಯಂತ ಹಳೆಯದಾಗಿದ್ದ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ದೇವಾಲಯವನ್ನು ದೇವಾಲಯದ ಪೂಜಾ ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳ ಉದಾರ ಸಹಕಾರವನ್ನು ಪಡೆದು, ದೇವಾಲಯವನ್ನು ವಿಶಾಲವಾಗಿ ನಿರ್ಮಿಸಲಾಗಿದ್ದು, ದೇವರ ಗರ್ಭಗುಡಿಯನ್ನು ನವೀಕರಿಸಲಾಗಿದ್ದು, ಗುರುವಾರದಂದು ನೂತನ ಗರ್ಭಗುಡಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು.
ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಮರಡಿ ಗುಡ್ಡದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಗಂಗಸ್ನಾನ ಮಾಡಿ ಗಣಪತಿ ಪೂಜೆಯ ನಂತರ ಸಂಜೆ ಐದು ಮೂವತ್ತಕ್ಕೆ ಸರಿಯಾಗಿ ಸುಮಂಗಲರಿಂದ ಗಂಗಾ ಪೂಜೆ ಮಾಡಿ ಆಲಯ ಪ್ರವೇಶ ಮಾಡಲಾಯಿತು.
ಗುರುವಾರ ಬೆಳಗ್ಗೆ ಬೆಳಗಿನ ಜಾವ 5ಗೆ ಪ್ರಧಾನ ಕಲಶಾರಾಧನೆ ಸಪ್ತಸೂತ್ರರಾಧನೆ, ನವದುರ್ಗ ಆರಾಧನೆ ನಡೆದು ಬೆಳಗ್ಗೆ 5.30ರಿಂದ 6ಘಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ದೇವಿಯವರ ಸ್ಥಿರಮೂರ್ತಿ ಪ್ರತಿಷ್ಠಾಪನೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಪಂಚಾಮೃತ ಅಭಿಷೇಕ ನವಗ್ರಹ ಹೋಮ ಹಾಗೂ ದುರ್ಗಾ ಹೋಮ ಶ್ರೀ ಗಣಪತಿ ಹೋಮ, ದೇವನಾಂದಿ, ರಕ್ಷಾಬಂಧನ, ಕಲಶಸ್ಥಾಪನೆ, ಪೂರ್ಣಾಹುತಿ, ನವಗ್ರಹ ಪುರಸ್ಸರ ವಾಸ್ತುಹೋಮ, ರಾಕ್ಷೋಘ್ನ ಹೋಮ, ಬಲಿಪ್ರಧಾನ ಕಾರ್ಯಗಳು ನೆರವೇರಿದವು.
ವಿವಿಧ ಕಾರ್ಯಕ್ರಮಗಳು ನಡೆದವು ನಂತರ ಬಂದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕೂಡ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q