ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ಕೃಷಿಕರೊಂದಿಗೆ ಆತ್ಮೀಯವಾಗಿ ಬೆರೆತರು. ಸಚಿವರಿಗೆ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡಿದರು.
ಇದೇ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, 2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ಸೀತಾಪುರ ಗ್ರಾಮದಲ್ಲೇ ಭತ್ತ ನಾಟಿ ಮಾಡಿದ್ದೆ. ಅಂದು ಕೂಡ ಆಗಸ್ಟ್ 11ರಂದೇ ಭತ್ತದ ನಾಟಿ ಮಾಡಿದ್ದೆ. ಈಗ ಅದೇ ದಿನಾಂಕದಲ್ಲಿ ಮತ್ತೆ ಭತ್ತ ನಾಟಿ ಮಾಡಿದೇನೆ. ಇದು ಕಾಕತಾಳೀಯ ಅನ್ನಿಸುತ್ತಿದೆ. ಈಗ ಕೇಂದ್ರ ಸಚಿವನಾಗಿ, ಮಂಡ್ಯ ಜಿಲ್ಲೆ ಸಂಸದನಾಗಿ ಭತ್ತ ನಾಟಿ ಮಾಡಿದ್ದೇನೆ. ಇದಕ್ಕಿಂತ ಮಹಾಭಾಗ್ಯ ಏನಿದೆ? ಎಂದರು.
ರೈತ ಮಹಿಳೆಯರ ಜತೆಗೂಡಿ ಭತ್ತದ ನಾಟಿ ಮಾಡಿದ್ದೇನೆ. ಈ ಭಾಗದ ರೈತರು ನಾಯಕರು ಮತ್ತೆ ನಾಟಿಗೆ ಬನ್ನಿ ಎಂದು ಪ್ರೀತಿಯಿಂದ ಕರೆದರು. ಸಿಎಂ ಆಗಿದ್ದಾಗ ಮೊದಲ ಬಾರಿಗೆ ನಾಟಿ ಮಾಡಿದ್ದೆ. ಈಗ ಕೇಂದ್ರದ ಮಂತ್ರಿ ಆಗಿದ್ದೇನೆ. ರೈತರಿಗೆ ಆತ್ಮಸೈರ್ಯ ತುಂಬಲು ಈ ರೀತಿ ಕೆಲಸ ಮಾಡಬೇಕು. 2018ರಲ್ಲಿ ನಾಟಿ ಮಾಡಿದಾಗ ಉತ್ತಮ ಉಳುವರಿ ಬಂದಿತ್ತು. ನಾಟಿಯ ಜತೆಗೆ ಬೆಳೆಗೆ ಕೈಗೆ ಬಂದಾಗ ಪೂಜೆಯನ್ನು ಸಹ ಮಾಡಿದ್ದೆ. ನಮ್ಮ ರೈತರ ಬದುಕಿನ ಕಷ್ಟಗಳನ್ನು ನೋಡಿ ಅನುಭವಿಸಿದ್ದೇವೆ ಎಂದರು.
ಬಿಳಿ ಅಂಗಿ, ಪಂಚೆ ಧರಿಸಿದ್ದ ಸಚಿವರು, ನೂರಾರು ರೈತಾಪಿ ಮಹಿಳೆಯರು, ಪುರುಷರ ಜತೆ ಸೇರಿ ಗದ್ದೆಗೆ ಇಳಿದರಲ್ಲದೆ, ಬಹಳ ಹೊತ್ತು ಭತ್ತ ನಾಟಿ ಮಾಡಿದರು. ಜತೆಗೆ, ಭತ್ತ ನಾಟಿ ಯಂತ್ರವನ್ನು ಚಾಲನೆ ಮಾಡಿ ಕೃಷಿಕರಿಗೆ ಉತ್ಸಾಹ ತುಂಬಿದರು.
ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು, ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಶಾಸಕ ಮಂಜುನಾಥ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಸೇರಿದಂತೆ ಅನೇಕ ಮುಖಂಡರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296