ಸುರಪುರವೆಂಬ ಊರಿನಲ್ಲಿ ಒಂದು ನಾಯಿ ಮತ್ತು ಒಂದು ಕೋಳಿಗೆ ಜಗಳ ಹತ್ತಿಕೊಂಡಿತು. ಅದರಂತೆ ಅವರುಗಳ ಹಿರಿಯ ಮುಖಂಡ ಹಿರಿಯ ನಾಯಿ, ಮತ್ತು ಹಿರಿಯ ರಾಣಿ ಕೋಳಿ ಬಳಿ ಬಂದು ನಮ್ಮ ಸಮಸ್ಯೆ ಬಗೆಹರಿಸಿಕೊಡಬೇಕಾಗಿ ಕೇಳಿಕೊಂಡವು. ಮುಖಂಡರುಗಳು ನಿಮ್ಮ ಸಮಸ್ಯೆ ಹೇಳಿ ಎಂದಾಗ ನಾಯಿಯು ಇನ್ನು ಮುಂದೆ ನಾನು ಯಾವಾಗಲೂ ಮನೆ ಕಾಯುವ ಕೆಲಸ ಮಾಡಲಾರೆ, ಈ ಕೋಳಿಯಾದರೋ ಬೆಳಗಿನ ಝಾವ ಎಲ್ಲರನ್ನೂ ಕೂಗಿ ಎಬ್ಬಿಸುವುದೊಂದೇ ಕೆಲಸ ಹಾಗಾಗಿ ಈ ಕೋಳಿಯ ಕೆಲಸ ಇನ್ನುಮಂದೆ ನಾನು ಮಾಡುತ್ತೇನೆ ಎಂದಿತು.
ಕೋಳಿಯೂ ಕೂಡ ನಾನು ಊರಿನ ಜನರನ್ನೆಲ್ಲಾ ಎಬ್ಬಿಸಲು ನಾನು ಎಲ್ಲರಿಗಿಂತ ಮೊದಲು ಎದ್ದೂ ಎದ್ದೂ ಸಾಕಾಗಿ ಹೋಗಿದೆ. ಹಾಗಾಗಿ ಈ ನಾಯಿಯಂತೆ ಯಾವಾಗಲೂ ಮನೆಯ ಬಳಿ ಮಲಗಿಕೊಂಡು ಕಾಯುವ ಕೆಲಸ ಮಾಡುತ್ತೇನೆ ಎಂದಿತು. ಇವರುಗಳಿಗೆಲ್ಲಾ ಬುದ್ಧಿ ಕಲಿಸಲು ಮುಖಂಡರುಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಹಾಗೇ ಆಗಲಿ ಎಂದರು.
ಅದೇ ರೀತಿ ಅಂದು ರಾತ್ರಿ ಕೋಳಿಗಳೆಲ್ಲಾ ಸದ್ಯ ಇನ್ನು ಬೆಳಗ್ಗೆ ಬೇಗ ಏಳಬೇಕಿಲ್ಲ ಎಂದು ಖುಷಿಪಡುತ್ತಾ ತಮ್ಮ ತಮ್ಮ ಯಜಮಾನನ ಮನೆ ಮುಂದೆ ಮಲಗಿಕೊಂಡವು, ಅದೇ ರೀತಿ ನಾಯಿಗಳೆಲ್ಲಾ ಬೆಳಗ್ಗೆ ಒಮ್ಮೆ ಎದ್ದು ಜನರನ್ನು ಎಬ್ಬಿಸಿ ಮತ್ತೆ ಮಲಗಬಹುದು ಎಂದು ಖುಷಿ ಪಡುತ್ತಾ ತಮ್ಮ ತಮ್ಮ ಯಜಮಾನನ ಮನೆ ಮುಂದೆ ಮಲಗಿಕೊಂಡವು. ಮಧ್ಯರಾತ್ರಿಯಾಯಿತು ಕೆಲವು ಬೇರೆ ಬೀದಿಯ ನಾಯಿಗಳು ಅಡ್ಡಾಡುತ್ತಾ ತಮ್ಮ ತಮ್ಮ ಮನೆಕಡೆ ಬರುವುದನ್ನ ನೋಡಿದ ಊರಿನ ಕೋಳಿಗಳೆಲ್ಲಾ ಒಮ್ಮಿಂದೊಮ್ಮೆಲೇ ಕೊಕ್ಕೋಕೋ ಕೋ ಎಂದು ಕೂಗಲು ಪ್ರಾರಂಭಿಸಿದವು, ಎಷ್ಟು ಹೊತ್ತಾದರೂ ನಿಲ್ಲಿಸಲೇ ಇಲ್ಲ. ಗಾಢ ನಿದ್ರೆಯಲ್ಲಿ ಮಲಗಿದ್ದ ಊರ ಜನರೆಲ್ಲಾ ಒಮ್ಮಿಂದೊಮ್ಮೆಗೆ ಕೋಳಿಗಳ ಕೂಗಾಟಕ್ಕೆ ಎದ್ದು ಕೋಳಿಗಳ ವಿಚಿತ್ರ ವರ್ತನೆ ಕಂಡು ಏನೋ ಆಗಿರಬೇಕು ಎಂದುಕೊಂಡು ಮತ್ತೆ ಹೋಗಿ ಮಲಗಿದರು.
ಕೋಳಿಗಳು ಜನಗಳಿಗೆ ಅರ್ಥ ಮಾಡಿಸುವಲ್ಲಿ ವಿಫಲವಾದವು, ಅಂದು ಬೆಳಗಿನ ಝಾವ 4 ಗಂಟೆಯಾಗುತ್ತಿದ್ದಂತೆ ಊರನಾಯಿಗಳೆಲ್ಲಾ ಎದ್ದು ಒಮ್ಮಿಂದೊಮ್ಮೆಲೇ ಬೌಬೌಬೌ ಎಂದು ಬೊಗಳಲು ಪ್ರಾರಂಭಿಸಿದವು ಮತ್ತೆ ಗಾಢ ನಿದ್ರೆಯಿಂದ ಎದ್ದ ಊರ ಜನರೆಲ್ಲಾ ಇದ್ದಕ್ಕಿದ್ದಂತೆ ಈ ನಾಯಿಗಳಿಗೆಲ್ಲಾ ಏನಾಯಿತು ಎಂದು ಹೊರಗೆ ಬಂದು ನೋಡಿ ಏನೋ ಆಗಿರಬೇಕು ಎಂದುಕೊಂಡು ಮತ್ತೆ ಹೋಗಿ ಮಲಗಿದರು.
ಈಗ ನಾಯಿಗಳೂ ಕೂಡ ಜನರಿಗೆ ಅರ್ಥಮಾಡಿಸುವಲ್ಲಿ ವಿಫಲವಾದವು. ಹೀಗೆಯೇ ಒಂದು ವಾರ ಕಳೆಯಿತು. ಊರ ಜನರು ಈ ಕೋಳಿ ನಾಯಿಗಳ ವಿಚಿತ್ರ ವರ್ತನೆಯಿಂದ ನಿದ್ರೆಯಿಲ್ಲದೇ ಸಾಕಾಗಿ ಹೋಗಿದ್ದರು. ಕೊನೆಗೆ ಊರ ಜನರೆಲ್ಲಾ ಒಂದು ತೀರ್ಮಾನಕ್ಕೆ ಬಂದು ಎಲ್ಲ ನಾಯಿ ಮತ್ತು ಕೋಳಿಗಳನ್ನು ಸೆರೆಹಿಡಿದು ಕಾಡಿನ ಮಧ್ಯಭಾಗಕ್ಕೆ ಹೋಗಿ ಬಿಟ್ಟು ಬಂದರು. ಆದರೆ ಕಾಡಿನಲ್ಲಿ ಹುಲಿ ಚಿರತೆ ತೋಳಗಳ ಕಾಟದಿಂದ ಜೀವ ಉಳಿದರೆ ಸಾಕು ಎಂದುಕೊಂಡು ಭಯಭೀತವಾಗಿ ಹೇಗೋ ಸಿಕ್ಕ ಸಿಕ್ಕ ದಾರಿಯಲ್ಲಿ ಮತ್ತೆ ತಮ್ಮ ಊರನ್ನು ಸೇರಿಕೊಂಡವು. ಮತ್ತೆ ತಮ್ಮ ತಮ್ಮ ಮುಖಂಡರ ಬಳಿ ಬಂದು ತಮ್ಮ ತಪ್ಪು ನಮಗೆ ಅರಿವಾಗಿದೆ ನಾವು ಈ ಮೊದಲಿನಂತೆ ನಮ್ಮ ನಮ್ಮ ಕೆಲಸ ಮಾಡಿಕೊಂಡೇ ಇರುತ್ತೇವೆ ಎಂದಾಗ ಮುಖಂಡರುಗಳು ನಾವು ಮಾತಿನಿಂದ ತಿಳಿಹೇಳಿದ್ದರೆ ನಿಮಗೆಲ್ಲಾ ಅರ್ಥವಾಗುತ್ತಿರಲಿಲ್ಲ ಈಗ ನೋಡಿ ನೀವೇ ಪ್ರಾಯೋಗಿಕವಾಗಿ ಸಿದ್ಧಿ ಮಾಡಿಕೊಂಡಿರಿ ಎಂದಾಗ ಎಲ್ಲವೂ ಕ್ಷಮೆ ಕೇಳಿದವು.
ನೀತಿ: ಕೆಲವು ಸಂದರ್ಭಗಳಲ್ಲಿ ಹೇಳಿದ್ದನ್ನು ಅರ್ಥಮಾಡಿಕೊಳ್ಳದ ಕೆಲವರಿಗೆ ಸಂದರ್ಭಗಳೇ ಪಾಠ ಕಲಿಸಲೆಂದು ಸುಮ್ಮನೆ ಬಿಟ್ಟುಬಿಡಬೇಕು.

ಸಂಪಾದಕರ ನುಡಿ
“ಯಾರು ಯಾವ ಕೆಲಸ ಮಾಡಬೇಕೋ ಅದೇ ಮಾಡಬೇಕು” ಎಂಬ ಈ ಕಥೆ ನಾವು ಜೀವನದಲ್ಲಿ ಪಾಲಿಸಬೇಕಾದ ಮಹತ್ವದ ತತ್ವವನ್ನು ಎತ್ತಿಹಿಡಿಯುತ್ತದೆ. ಪ್ರಪಂಚದ ಎಲ್ಲ ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ತಮ್ಮದೇ ಆದ ಜವಾಬ್ದಾರಿ ಮತ್ತು ಪಾತ್ರಗಳಿವೆ. ಅವುಗಳನ್ನು ಬದಲಾಯಿಸಲು ಮಾಡಿದ ಪ್ರಯತ್ನ ಹೇಗೆ ಗೊಂದಲ ಮತ್ತು ಅನಾವಶ್ಯಕ ತೊಂದರೆ ಉಂಟುಮಾಡಬಹುದು ಎಂಬುದನ್ನು ಈ ಕಥೆ ಮನಮುಟ್ಟುವಂತೆ ವಿವರಿಸುತ್ತದೆ.
ಸಮಾಜದ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಸಮತೋಲನ ಸ್ಥಿರವಾಗಿರುತ್ತದೆ. ನಿರ್ದಿಷ್ಟ ಹೊಣೆಗಾರಿಕೆಯಿಂದ ದೂರ ಸರಿಯಲು ಅಥವಾ ಇತರರ ಕಾರ್ಯವನ್ನು ಸ್ವೀಕರಿಸಲು ಮಾಡಿದ ಪ್ರಯತ್ನಗಳು ಹೇಗೆ ವಿಫಲಗೊಳ್ಳುತ್ತವೆ ಎಂಬುದನ್ನು ಈ ಕಥೆ ಸೂಕ್ಷ್ಮವಾಗಿ ಚಿತ್ರಿಸುತ್ತದೆ.
ಈ ಕಥೆ ಪ್ರತಿದಿನದ ಜೀವನದಲ್ಲಿ ಅನ್ವಯವಾಗುವಂತಹ ಸಂದೇಶವನ್ನು ಒಳಗೊಂಡಿದೆ. ಕೆಲವೊಮ್ಮೆ ಯಾರಾದರೂ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದಾಗ ಅಥವಾ ಅನಾವಶ್ಯಕವಾಗಿ ಇತರರ ಜವಾಬ್ದಾರಿಗಳನ್ನು ಸ್ವೀಕರಿಸಲು ಪ್ರಯತ್ನಿಸಿದಾಗ, ಅನುಭವವೇ ಅವರಿಗೆ ಸತ್ಯದ ಪಾಠ ಕಲಿಸುತ್ತದೆ.
ನಮ್ಮ ಓದುಗರಿಗೆ ಈ ಕಥೆ ಬದುಕಿನ ಸರಳ ಸತ್ಯಗಳನ್ನು ಮನಪೂರ್ವಕವಾಗಿ ಪರಿಗಣಿಸಲು ಪ್ರೇರಣೆ ನೀಡಬಹುದು ಎಂಬ ವಿಶ್ವಾಸವಿದೆ.
— ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4