ತುಮಕೂರು: ಪ್ರಿಯಕರನೊಂದಿಗೆ ಸೇರಿ ಗಂಡನನ್ನೆ ಬೆಂಕಿ ಹಚ್ಚಿ ರಸ್ತೆಯಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರ ಇಬ್ಬರಿಗೂ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅನ್ನಪೂರ್ಣ ಮತ್ತು ರಾಮಕೃಷ್ಣ ಇಬ್ಬರು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ತಲಾ ರೂ. 30,000/- ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗೋಕುಲ–ಬಡ್ಡಿಹಳ್ಳಿ ಬಡಾಣೆಯಲ್ಲಿ ನಾರಾಯಣ ಬಾಬು ವಾಸವಾಗಿದ್ದರು. ಅವರನ್ನು ಅವರ ಪತ್ನಿ ಅಪರಾಧಿ ಅನ್ನಪೂರ್ಣ ತನ್ನ ಪ್ರಿಯಕರನೊಂದಿಗೆ ಸೇರಿ 2021ರ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಜಿ.ನಾರಾಯಣ ಅವರನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ಮೈಯೆಲ್ಲಾ ಬೆಂಕಿ ಹತ್ತಿಕೊಂಡು ಉರಿ ತಾಳಲಾರದೇ ಜಿ.ನಾರಾಯಣ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಮನೆಯ ಮುಂದೆ ಸ್ವಲ್ಪ ದೂರದಲ್ಲಿದ್ದ ಸಿಮೆಂಟ್ ಚರಂಡಿಗೆ ಮಕಾಡೆಯಾಗಿ ಬಿದ್ದಿದ್ದರು. ಅಲ್ಲಯೇ ಇದ್ದ ಆರೋಪಿ ರಾಮಕೃಷ್ಣ ಆತನನ್ನು ಹಿಂಬಾಲಿಸಿಕೊಂಡು ಬಂದು ಅಲ್ಲಿಯೇ ಬಿದ್ದಿದ್ದ 2 ಕಲ್ಲುಗಳಿಂದ ನಾರಾಯಣ ಅವರ ತಲೆಯ ಹಿಂಭಾಗಕ್ಕೆ ಎತ್ತಿ ಹಾಕಿದ್ದರು. ಇದರ ಪರಿಣಾಮವಾಗಿ ಜಿ.ನಾರಾಯಣ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಅನ್ನಪೂರ್ಣ ಆರೋಪಿ ರಾಮಕೃಷ್ಣನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವಿಚಾರವು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನಾರಾಯಣನ ಮೇಲೆ ಆಗಾಗ್ಗೆ ಅನ್ನಪೂರ್ಣ ಜೊತೆ ಜಗಳವಾಡುತ್ತಿದ್ದನು. ಹೀಗಾಗಿ ನಾರಾಯಣನಿಗೆ ಏನಾದರೂ ಮಾಡಿ ಒಂದು ಗತಿ ಕಾಣಿಸಬೇಕೆಂದು ಹೇಳಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಹೆಚ್.ಅನಂತ್ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ಹಾಗೂ ತಲಾ ರೂ. 30,000/- ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ 2 ನೇ ಅಪರ ಸರ್ಕಾರಿ ಅಭಿಯೋಜಕರಾದ ವಿ.ಎ.ಕವಿತ ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx