‘ದಲಿತ ಸಂಘಟನೆಗಳು ಒಗ್ಗೂಡಬೇಕು. ನಮ್ಮ ಒಡಕುಗಳನ್ನೇ ಬೇರೆಯವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ, ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತ್ಯುತ್ಸವ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಏಕತೆಗಾಗಿ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳುವವನೇ ಭೂ ಒಡೆಯ ಎನ್ನುವ ಕಾನೂನನ್ನು ಬಿಜೆಪಿಯವರು ಉಲ್ಟಾ ಮಾಡಿ ಉಳ್ಳವನೇ ಭೂ ಒಡೆಯ ಎಂದು ಬದಲಾಯಿಸಿಬಿಟ್ಟಿದ್ದಾರೆ. ಇದಕ್ಕಾಗಿ ಸಂವಿಧಾನ 79 (a), (b)ವನ್ನೇ ರದ್ದುಪಡಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಟೀಕಿಸಿದರು.
ಅಧಿಕಾರ ಯಾರ ಕೈಗೆ ಕೊಡಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ ದಲಿತ-ಶೂದ್ರ ಸಮುದಾಯ ಪಡೆದುಕೊಳ್ಳಬೇಕು. ದಲಿತ-ಶೂದ್ರ-ಬಡವ ಮತ್ತು ಮಧ್ಯಮ ವರ್ಗಗಳಿಗೆ ಬದುಕಿನ ಅವಕಾಶ ದೊರಕಿದ್ದು ಸಂವಿಧಾನದಿಂದ. ಈ ಸಂವಿಧಾನವನ್ನು ದ್ಷೇಷಿಸುವವರ ಕೈಗೆ ಅಧಿಕಾರ ಕೊಟ್ಟರೆ ಬಡವ-ಮಧ್ಯಮ ವರ್ಗದವರ ಉದ್ದಾರ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಮತ್ತು ದಸಂಸ ಮುಖಂಡ ಡಿ.ಜಿ.ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


