ಮದುವೆಗೆಂದು ನಗರಕ್ಕೆ ಬಂದಿದ್ದ ಉದ್ಯಮಿಯೊಬ್ಬರ ಕುಟುಂಬಕ್ಕೆ ಸೇರಿದ್ದ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಆರೋಪಿ ನಂದೀಶ್‌ನನ್ನು (36) ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾನುಕುಂಟೆ ನಿವಾಸಿ ನಂದೀಶ್, ಕ್ಯಾಬ್ ಚಾಲಕ, ವಜ್ರ ಹಾಗೂ ಚಿನ್ನಾಭರಣಗಳಿದ್ದ ಸೂಟ್ ಕೇಸ್ ಕದ್ದುಕೊಂಡು ಪರಾರಿಯಾಗಿದ್ದ. ಉದ್ಯಮಿ ದೂರು ನೀಡುತ್ತಿದ್ದಂತೆ ತನಿಖೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. 7 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಜ್ರದ ಆಭರಣ ಜಪ್ತಿ ಮಾಡಲಾಗಿದೆ.
ಮೂವರು ಮಹಿಳೆಯರು ಹಾಗೂ ಉದ್ಯಮಿ ಚಿನ್ನಾಭರಣ ಹಾಗೂ ವಜ್ರದ ಆಭರಣ ಧರಿಸಿದ್ದರು. ಆರೋಪಿ ನಂದೀಶ್ ತನ್ನ ಕ್ಯಾಬ್‌ನಲ್ಲಿ ಎಲ್ಲರನ್ನೂ ಮದುವೆಗೆ ಕರೆದೊಯ್ದಿದ್ದ. ಅದೇ ವೇಳೆಯೇ ಚಿನ್ನಾಭರಣ ಹಾಗೂ ವಜ್ರದ ಆಭರಣ ಗಮನಿಸಿದ್ದ ಎಂದು ತಿಳಿಸಿದರು.
‘ಮದುವೆ ಮುಗಿಸಿದ್ದ ಉದ್ಯಮಿ ಕುಟುಂಬ, ವಾಪಸು ಹೋಟೆಲ್‌ಗೆ ಬಂದಿದ್ದರು. ನಂತರ, ಚೆನ್ನೈಗೆ ಹೋಗಲು ಸಿದ್ಧರಾಗಿದ್ದರು. ಬ್ಯಾಗ್‌ಗಳು ಹಾಗೂ ಸೂಟ್‌ಕೇಸ್‌ಗಳನ್ನು ಕ್ಯಾಬ್‌ನಲ್ಲಿ ಇರಿಸಲಾಗುತ್ತಿತ್ತು. ಇದೇ ಸಂದರ್ಭದಲ್ಲಿಯೇ ಆರೋಪಿ, ಚಿನ್ನಾಭರಣ-ವಜ್ರವಿದ್ದ ಸೂಟ್‌ಕೇಸ್ ಕದ್ದುಕೊಂಡು ಪರಾರಿಯಾಗಿದ್ದ’ ಎಂದು ಹೇಳಿದರು.
ಚಿನ್ನಾಭರಣ ಮಾರಾಟ: ‘ಮನೆಗೆ ಹೋಗಿದ್ದ ಆರೋಪಿ, ಚಿನ್ನಾಭರಣ ಹಾಗೂ ವಜ್ರದ ಆಭರಣ ಮುಚ್ಚಿಟ್ಟಿದ್ದ. ಸ್ವಲ್ಪ ಚಿನ್ನಾಭರಣವನ್ನು ಬೇರೆಡೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದ. ಆರೋಪಿಯನ್ನು ಬಂಧಿಸುತ್ತಿದ್ದಂತೆ ಎಲ್ಲ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.


