ಸರಗೂರು: “ನಮ್ಮ ಭಾರತ ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರು ಪ್ರತಿಯೊಬ್ಬ ಮಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕೆಂದು ಶಿಕ್ಷಣದ ಹಕ್ಕಿನಲ್ಲಿ ಸೇರಿಸಿದ್ದರಿಂದಲೇ, ಇಂದು ನಮಗೆಲ್ಲರಿಗೂ ಉತ್ತಮ ಶಿಕ್ಷಣ ಕಲಿಯಲು ಅನುಕೂಲವಾಗಿದೆ” ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಎಸ್.ಡಿ. ಸಣ್ಣಸ್ವಾಮಿ ಸರಗೂರು ತಿಳಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಸರಗೂರು ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನ” ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಸಿಗುವ ಹಲವು ಉಚಿತ ಸೌಲಭ್ಯಗಳು ಹಾಗೂ ಪ್ರೋತ್ಸಾಹಕಗಳ ಕುರಿತು ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು ‘ಕ್ಷೀರಭಾಗ್ಯ’ ಯೋಜನೆಯಡಿ ಪ್ರತಿದಿನ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ. ಉಚಿತ ಪಠ್ಯಪುಸ್ತಕಗಳು, ನೋಟ್ಬುಕ್ಗಳು, ಉಚಿತ ಶಾಲಾ ಬ್ಯಾಗ್, ಸಮವಸ್ತ್ರ, ಶೂ-ಸಾಕ್ಸ್ಗಳು ಹಾಗೂ ಉಚಿತ ಬಸ್ ಪಾಸ್ ಸೌಲಭ್ಯ. ವಿವಿಧ ವರ್ಗಗಳ (ಎಸ್ಸಿ/ಎಸ್ಟಿ/ಓಬಿಸಿ) ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಟಾಪರ್ಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ. ಶೇ.100 ಫಲಿತಾಂಶ ಪಡೆಯುವ ಶಾಲೆಗಳಿಗೆ ಮತ್ತು ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ನಿಯಮಿತ ಉಚಿತ ಆರೋಗ್ಯ ತಪಾಸಣೆ ಹಾಗೂ ‘ಶುಚಿ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ. ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳು, ವಿಶಾಲವಾದ ಆಟದ ಮೈದಾನ, ಗಣಕಯಂತ್ರ (ಕಂಪ್ಯೂಟರ್) ಶಿಕ್ಷಣ, ಗ್ರಂಥಾಲಯ ಹಾಗೂ ಕ್ರೀಡಾ ಪರಿಕರಗಳ ಲಭ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು.
“ಪ್ರತಿಭಾ ಕಾರಂಜಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳು ತಮ್ಮ ಸದೃಢ ಭವಿಷ್ಯವನ್ನು ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳು ಅತ್ಯುತ್ತಮ ವೇದಿಕೆಯಾಗಿವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು” ಎಂದು ಅವರು ಕರೆ ನೀಡಿದರು.
ಈ ಜಾಗೃತಿ ಜಾಥಾದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷರಾದ ಶಿವರುದ್ರ, ಮುಖ್ಯ ಶಿಕ್ಷಕರಾದ ನಿಂಗರಾಜು, ಸಹಶಿಕ್ಷಕಿಯರಾದ ಸವಿತಾ, ಮಮತಾ ಹಾಗೂ ಬಾಲಕರ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


