ಮಧುಗಿರಿ: ತಾಲ್ಲೂಕಿನಲ್ಲಿ ಮಳೆ ಕೊರತೆ ಎದುರಾಗಿರುವುದರಿಂದ ಭವಿಷ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಈ ಸಮಸ್ಯೆ ತೀವ್ರಗೊಳ್ಳುವ ಮುನ್ನವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮಿಡಿಗೇಶಿ ಹೋಬಳಿಯ ಅವರಗಲ್ಲು ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ರೈತರ ಜಮೀನುಗಳಿಗೆ ತೆರಳಿ ವಿವಿಧ ಬೆಳೆಗಳ ಸ್ಥಿತಿಗತಿ, ಮಳೆಯ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳಿಗೆ ಎದುರಾಗಿರುವ ತೊಡಕುಗಳ ಕುರಿತು ನೇರವಾಗಿ ರೈತರಿಂದಲೇ ಮಾಹಿತಿ ಪಡೆದುಕೊಂಡರು.
ಬಳಿಕ ಮಧುಗಿರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣೆ ಹಾಗೂ ಬರ ಪರಿಸ್ಥಿತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಅಭಾವ ತಲೆದೋರದಂತೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಬರ ಪರಿಸ್ಥಿತಿ ಎದುರಾದರೆ ಗ್ರಾಮೀಣ ಜನರಿಗೆ ಉದ್ಯೋಗದ ಕೊರತೆ ಉಂಟಾಗದಂತೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಮತ್ತು ಇದಕ್ಕಾಗಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ವಿಬಿ–ಜಿ ರಾಮ್–ಜಿ ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಆಡಳಿತ ಸಿಬ್ಬಂದಿಗೆ ಸೂಚಿಸಿದ ಪರಮೇಶ್ವರ್, ಗ್ರಾಮೀಣ ಭಾಗದ ಜನರಿಗೆ ಅವರ ಊರಿನಲ್ಲೇ ಉದ್ಯೋಗ ದೊರೆಯುವಂತೆ ಕಾಮಗಾರಿಗಳನ್ನು ಯೋಜಿಸಬೇಕು ಎಂದರು. ಕೆರೆ ಹೂಳೆತ್ತುವುದು, ನೀರು ಹರಿಸುವ ಕಾಲುವೆ ಹಾಗೂ ತಿರುಗಾಲುವೆ ನಿರ್ಮಾಣ, ಚೆಕ್‌ಡ್ಯಾಂ ಸೇರಿದಂತೆ ಗ್ರಾಮೀಣ ಪ್ರದೇಶದ ಅಗತ್ಯ ಕಾಮಗಾರಿಗಳನ್ನು ಗುರುತಿಸಿ, ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಚಟುವಟಿಕೆಗಳ ಮೇಲೆ ಮಳೆ ಕೊರತೆಯಿಂದ ಉಂಟಾಗಬಹುದಾದ ಪರಿಣಾಮವನ್ನು ನಿರಂತರವಾಗಿ ಗಮನಿಸಿ, ಗ್ರಾಮವಾರು ಪರಿಸ್ಥಿತಿಯ ಮಾಹಿತಿ ಪಡೆದು ಅಗತ್ಯವಿರುವ ಕಡೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬರ ಘೋಷಣೆಯ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನವೇ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ, ತಹಶೀಲ್ದಾರ್ ನಂದಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉತ್ತಮ್, ಡಿವೈಎಸ್‌ಪಿ ಮಂಜುನಾಥ್, ಸಹಾಯಕ ನಿರ್ದೇಶಕ ಧನಂಜಯ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
