ಕುಣಿಗಲ್: ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ದಲಿತ ಯುವಕ ಸಿಂಹಾದ್ರಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಜೊತೆಗೆ ಹತ್ಯೆಗೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ತಾಲೂಕು ಆಡಳಿತ ಸೌಧ ಬಳಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಕಂಬಾಲಪಳ್ಳಿಯಲ್ಲಿ ದಲಿತರ ಸಜೀವ ದಹನ ಸೇರಿದಂತೆ ರಾಜ್ಯದ ವಿವಿಧಡೆ ನಡೆದ ದಲಿತರ ಕಗ್ಗೊಲೆ ಸಂದರ್ಭ ರಾಜ್ಯದಲ್ಲಿ ಗೃಹ ಸಚಿವರು, ಉಪ ಮುಖ್ಯಮಂತ್ರಿ ದಲಿತರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಅಧಿಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಮೃತನ ತಾಯಿಗೆ ಪರಿಹಾರ ನೀಡಿ:
ಸಿಂಹಾದ್ರಿ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕುಮ್ಮಕ್ಕು ನೀಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಪ್ರಕರಣವೆಂದು ಭಾವಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ತಾಯಿಗೆ 50 ಲಕ್ಷ ರೂ. ಪರಿಹಾರದ ಜೊತೆಗೆ ಎರಡು ಎಕರೆ ಭೂಮಿ ನೀಡಬೇಕು. ದಲಿತರ ಜೀವ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮಿನಾರಾಯಣ್, ತಾ.ಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಉಪಾಧ್ಯಕ್ಷ ವೆಂಕಟಗಿರಿಯಪ್ಪ, ಸದಸ್ಯ ಎಸ್.ಟಿ.ರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಡಿ.ಕುಮಾರ್, ಸದಸ್ಯ ದೇವರಾಜು, ಡಿಎಸ್ಎಸ್ ಜಿಲ್ಲಾ ಸಂಚಾಲಕ ವಿ. ಶಿವಶಂಕರ್, ಪ್ರಗತಿ ಪರ ಚಿಂತಕ ಜಿ.ಕೆ.ನಾಗಣ್ಣ, ದಲಿತ ನಾರಾಯಣ್, ಮುಖಂಡರಾದ ನಗುತಾ ರಂಗನಾಥ್, ಶಿವರಾಜ್, ರಾಮಕೃಷ್ಣ, ನರಸಿಂಹಮೂರ್ತಿ, ಕೆ.ಪಿ.ಶಿವಶಂಕರ್, ರಾಮು, ಸಿದ್ದರಾಜು ಮತ್ತಿತರರು ಇದ್ದರು.
ರಾಜ್ಯದಲ್ಲಿ ದಲಿತ ಸಮುದಾಯದ ಗೃಹ ಸಚಿವರಿದ್ದಾರೆ, ಅವರೇ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ರಾಜ್ಯದಲ್ಲಿ ದಲಿತರ ಪರ ಕಾಂಗ್ರೆಸ್ ಸರ್ಕಾರವಿದೆ ಎಂದು ಹೇಳುತ್ತಾರೆ. ಆದರೆ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಹತ್ಯೆ ಮಿತಿ ಮೀರಿದೆ. ಗಣಪತಿ ವಿಸರ್ಜನೆ ವೇಳೆಯಲ್ಲಿ ಸಂತೋಷವಾಗಿ ಕುಣಿಯುತ್ತಿದ್ದ ದಲಿತ ಯುವಕ ಭಾಗವಹಿಸಬಾರದೆಂದು ಅಲಿಖಿತ ಸಂವಿಧಾನ ಮಾಡಿ ಕೊಂಡು ಆತನನ್ನು ಹತ್ಯೆಗೈದಿರುವುದು ಮನುಕುಲ ತಲೆ ತಗ್ಗಿಸುವಂತಾಗಿದೆ. ಮಧುಗಿರಿ ತಾಲೂಕಿನಲ್ಲಿ ಅಧಿಕ ದಲಿತ ಸಮುದಾಯದವರು ಇದ್ದಾರೆ. ಒಂದು ಜಾತಿಯನ್ನು ಗುರಿಯಾಗಿರಿಸಿಕೊಂಡು ಆ ತಾಲೂಕಿನಲ್ಲಿ ನಿರಂತರವಾಗಿ ದಲಿತರನ್ನು ಕಗ್ಗೊಲೆ ಮಾಡಲಾಗುತ್ತಿದೆ. ಆ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿದ್ದಾರೆ. ಅವರ ಸಮುದಾಯದವರೇ ದಲಿತ ಯುವಕನನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಇವರೆಗೂ ಕೆ.ಎನ್.ರಾಜಣ್ಣನವರು ಪ್ರತಿಕ್ರಿಯೆ ನೀಡದೆ ಇರುವುದು ದುರಂತ.
— ದಲಿತ ಸಂಘಟನೆಗಳ ಒಕ್ಕೂಟ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
