ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅತ್ಯಂತ ಪ್ರಾಮಾಣಿಕ ರಾಜಕಾರಣಿ, 10 ವರ್ಷ ಪ್ರಧಾನಿಯಾಗಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷಗಳಾಗಿತ್ತು. ಅವರ ಬದುಕನ್ನು ಪವಾಡದ ರೀತಿ ನೋಡಬಹುದಾಗಿದೆ. ಇವತ್ತಿನ ಪಾಕಿಸ್ತಾನದ ಕುಗ್ರಾಮವೊಂದರಲ್ಲಿ ಜನಿಸಿದ್ದ ಅವರು,ಅಲ್ಲಿಂದ ದೇಶ ಹಾಗೂ ಜಗತ್ತಿನಲ್ಲೇ ಖ್ಯಾತ, ಶ್ರೇಷ್ಠ ಅರ್ಥ ಶಾಸ್ತ್ರಜ್ಞರಾಗಿ ಬೆಳೆದರು ಎಂದರು.
ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಐದು ವರ್ಷಗಳ ಕಾಲ ದೇಶದ ಆರ್ಥಿಕ ಸಲಹೆಗಾರರಾಗಿದ್ದರು. ಉದಾರೀಕರಣ ಹಾಗೂ ಖಾಸಗೀಕರಣದ ಮೂಲ ಭಾರತದ ಆರ್ಥಿಕತೆಯನ್ನು ಜಾಗತಿಕತೆಗೆ ಮುಕ್ತವಾಗಿಸಿದರು. ಆ ನಿರ್ಧಾರಗಳಿಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಯಿತು ಎಂದು ವಿಶ್ಲೇಷಿಸಿದರು.
ಅದರ ನಂತರ 2004ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗಲು ನಿರಾಕರಿಸಿದರು. ಆ ವೇಳೆ ಮನಮೋಹನ್ ಸಿಂಗ್ ರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ. 10 ವರ್ಷಗಳ ಕಾಲ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಪ್ರಧಾನಿಯಾಗಿ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಯತ್ನಿಸಿದ್ದರು ಎಂದರು.
ದೇಶ ಕಂಡ ಪ್ರಾಮಾಣಿಕರಲ್ಲಿ ಮನಮೋಹನ್ ಸಿಂಗ್ ಕೂಡ ಒಬ್ಬರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣುವುದು ಕಷ್ಟ. ಇವರು ಹತ್ತು ವರ್ಷವೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ದೇಶದ ಆರ್ಥಿಕತೆ ಮೇಲೆ ದೊಡ್ಡ ಪ್ರಭಾವ ಬಿಟ್ಟು ಹೋಗಿದ್ದಾರೆ. ಅವರ ಬದುಕು ಮತ್ತು ಆರ್ಥಿಕವಾಗಿ ಕೈಗೊಂಡ ನಿರ್ಣಯಗಳು ನಮೆಲ್ಲರಿಗೂ ಪ್ರೇರಣೆ ಮತ್ತು ಸ್ಪೂರ್ತಿಯಾಗಿದೆ. ಪ್ರಧಾನಿಯಾಗಿದ್ದೇನೆ ಎಂಬ ಕಾರಣಕ್ಕೆ ಎಂದೂ ಅಧಿಕಾರದ ಮದದಿಂದ ನಡೆದುಕೊಂಡಿರಲಿಲ್ಲ. ಅತ್ಯಂತ ಸರಳ, ಸಂಭಾವಿತ ರಾಜಕಾರಣಿ. ಅತ್ಯಂತ ಗೌರನ್ವಿತ ವ್ಯಕ್ತಿ ಎಂದು ಕೊಂಡಾಡಿದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರು ಐದು ಕೆಜಿ ಅಕ್ಕಿ ನೀಡಲು ಕಾರಣಕರ್ತರು ಮನಮೋಹನ್ ಸಿಂಗ್ ಎಂದು ಹೇಳಿದರು. ತಾವು ರಾಜ್ಯದಲ್ಲಿ ಅನ್ನಭಾಗ್ಯವನ್ನು ಮುಂದುವರೆಸಲು ಮನಮೋಹನ್ ಸಿಂಗ್ ಕಾರಣ. ಅವರ ಅಧಿಕಾರವಧಿಯಲ್ಲಿ ಬಡವರನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx